ನವದೆಹಲಿ: ಮುಂಬರುವ ಲೋಕಸಭೆ ಚುನಾಣೆಯಲ್ಲಿ ಬಿಜೆಪಿಯನ್ನು ದಿಟ್ಟವಾಗಿ ಎದುರಿಸಲು ರಚನೆಯಾಗುವ ಯಾವುದೇ ರಂಗದಿಂದ ಕಾಂಗ್ರೆಸ್ ಅನ್ನು ದೂರ ಮಾಡುವುದಿಲ್ಲ ಎಂದು ಹಿರಿಯ ರಾಜಕಾರಣಿ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ ಹೇಳಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಗಾಗಿ ತೃತೀಯರಂಗ ರಚನೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲು ಪವಾರ್ ಅವರ ದೆಹಲಿ ನಿವಾಸದಲ್ಲಿ ಸಭೆ ನಡೆದ ಮರುದಿನವೇ ಎನ್‌ಸಿಪಿ ನಾಯಕ ಈ ಸ್ಪಷ್ಟನೆ ನೀಡಿದ್ದಾರೆ.
ಮೈತ್ರಿ ಸಭೆಯಲ್ಲಿ ರಾಷ್ಟ್ರ ಮಂಚ್ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಒಂದು ವೇಳೆ ಪರ್ಯಾಯ ರಂಗ ಹುಟ್ಟುಕೊಂಡರೇ ಕಾಂಗ್ರೆಸ್ ಅನ್ನು ಜೊತೆಗೆ ಕರೆದೊಯ್ಯಲಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಪ್ರಶಾಂತ್-ಪವಾರ್ ಮತ್ತೆ ಭೇಟಿ: ಒಂದೇ ವಾರದಲ್ಲಿ ಎರಡು ಬಾರಿ ಮೀಟ್ ಆದ ನಾಯಕರು!
ಕಳೆದ ಕೆಲ ದಿನಗಳಿಂದ ರಾಜಕೀಯ ಕಾರ್ಯತಂತ್ರಗಳ ಚತುರ ಪ್ರಶಾಂತ್ ಕಿಶೋರ್ ಅವರೊಂದಿಗೆ ಶರದ್ ಪವಾರ್ ಸಭೆಗಳನ್ನು ನಡೆಸಿರುವುದು ರಾಷ್ಟ್ರ ಮಟ್ಟದಲ್ಲಿ ಭಾರಿ ಸುದ್ದಿಯಾಗಿದೆ. ಮಾಜಿ ಸಚಿವ ಯಶ್ವಂತ್ ಸಿನ್ಹಾ ಸ್ಥಾಪನೆಯ ರಾಷ್ಟ್ರ ಮಂಚ್ ಈ ಸಭೆಗಳನ್ನು ಆಯೋಜಿಸಿದೆ ಎನ್ನಲಾಗಿದೆ.
8 ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದಾರೆ. ಸಭೆಯಲ್ಲಿ ರಾಜಕೀಯವಾಗಿ ಏನೂ ಚರ್ಚೆ ಆಗಿಲ್ಲ ಎಂದು ಸಂಘಟಕರು ಹೇಳುತ್ತಿದ್ದಾರೆ. ದೇಶದಲ್ಲಿನ ಪ್ರಸ್ತುತ ವಿಷಯಗಳು ಕುರಿತು ಚರ್ಚೆಯಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.