ಕೋಲ್ಕತಾ(ಪಶ್ಚಿಮ ಬಂಗಾಳ): ಬಿರ್ಭೂಮ್ ಹಿಂಸಾಚಾರ ಪ್ರಕರಣದ ತನಿಖೆ ನಡೆಸಲು ಕೇಂದ್ರದ ತನಿಖಾ ದಳಗಳಿಗೆ ಅನುಮತಿ ನೀಡಬಾರದು ಎಂಬ ಸಿಎಂ ಮಮತಾ ಬ್ಯಾನರ್ಜಿ ಮನವಿಯನ್ನು ಕೋಲ್ಕತ್ತಾ ಹೈಕೋರ್ಟ್ ತಿರಸ್ಕರಿಸಿದೆ. ಈ ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ವಹಿಸಲಾಗಿದ್ದು, ಏಪ್ರಿಲ್ 7ರೊಳಗೆ ವರದಿಯನ್ನು ಸಲ್ಲಿಸಬೇಕೆಂದು ಸೂಚನೆ ನೀಡಿದೆ. ಇದರೊಂದಿಗೆ ಈಗಾಗಲೇ ತನಿಖೆ ನಡೆಸುತ್ತಿರುವ ಎಸ್‌ಐಟಿಗೆ ತನಿಖೆ ನಿಲ್ಲಿಸುವಂತೆ ನಿರ್ದೇಶನ ನೀಡಿದೆ.
ಸಿಬಿಐ ತನಿಖೆಗೆ ಸಹಕರಿಸಿ: ನ್ಯಾಯದ ಹಿತದೃಷ್ಟಿಯಿಂದ ಹಾಗು ಸಮಾಜದಲ್ಲಿ ವಿಶ್ವಾಸ ತುಂಬಲು ಮತ್ತು ಸತ್ಯ ಹೊರತೆಗೆಯಲು ನ್ಯಾಯಯುತ ತನಿಖೆ ನಡೆಸಬೇಕಿದೆ. ತನಿಖೆಯನ್ನು ಸಿಬಿಐಗೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುತ್ತಿದ್ದೇವೆ. ಮುಂದಿನ ತನಿಖೆಯನ್ನು ಕೈಗೊಳ್ಳಲು ಸಿಬಿಐಗೆ ಸಂಪೂರ್ಣ ಸಹಕಾರ ನೀಡುವಂತೆ ನಾವು ರಾಜ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತೇವೆ ಎಂದು ನ್ಯಾಯಪೀಠ ಆದೇಶಿಸಿದೆ. ಇದರೊಂದಿಗೆ ಮಮತಾ ಬ್ಯಾನರ್ಜಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಲಾಗಿದೆ.
ಬುಧವಾರ, ತೃಣಮೂಲ ಕಾಂಗ್ರೆಸ್ ನಾಯಕ ಭಾದು ಶೇಖ್ ಹತ್ಯೆಯ ನಂತರ ಎಂಟು ಜನರನ್ನು ಸುಟ್ಟುಹಾಕಿದ ಬಿರ್ಭೂಮ್ ಘಟನೆಯನ್ನು ಕೋಲ್ಕತ್ತಾ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಭಾರತೀಯ ಜನತಾ ಪಕ್ಷ ಸೇರಿದಂತೆ ಹಲವಾರು ರಾಜಕೀಯ ಪಕ್ಷಗಳು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿವೆ.
ಈ ಮಧ್ಯೆ ಹೂಗ್ಲಿಯ ಸಂಸದರಾದ ಲಾಕೆಟ್ ಚಟರ್ಜಿ ಬಿರ್ಭೂಮ್ನಲ್ಲಿ ಕನಿಷ್ಟ 20 ಮಂದಿ ಸಾವನ್ನಪ್ಪಿದ್ದಾರೆ. ಆದರೆ ನಿಜವಾದ ಸಂಖ್ಯೆ ಯಾರಿಗೂ ತಿಳಿದಿಲ್ಲ. ಯಾರಿಗೂ ಬಿರ್ಭೂಮ್ ಪ್ರವೇಶಕ್ಕೆ ಅನುಮತಿಯಿಲ್ಲ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಈ ಪ್ರಕರಣದ ಕುರಿತು ಪಶ್ಚಿಮ ಬಂಗಾಳ ಸರ್ಕಾರದಿಂದ ವಿವರವಾದ ವರದಿಯನ್ನು ಕೇಳಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಆಡಳಿತ ಪಕ್ಷ ಟಿಎಂಸಿ, ನಿಷ್ಪಕ್ಷಪಾತ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದೆ.
ಇದನ್ನೂ ಓದಿ: ಮೇಕೆದಾಟು: ತಮಿಳುನಾಡು ವಿರುದ್ಧ ವಿಧಾನ ಪರಿಷತ್ನಲ್ಲೂ ಖಂಡನಾ ನಿರ್ಣಯ