ನವದೆಹಲಿ: ಹೊಸ ಗೌಪ್ಯತಾ ನಿಯಮಗಳನ್ನು ಹಿಂಪಡೆಯುವಂತೆ ಮೆಸೆಂಜರ್ ಆ್ಯಪ್ ವಾಟ್ಸ್ಆ್ಯಪ್ಗೆ ನಿರ್ದೇಶಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್ಗೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಅರ್ಜಿ ಸಲ್ಲಿಸಿದೆ. ಭಾರತ ಸಂವಿಧಾನ ನೀಡಿರುವ ಮೂಲ ಹಕ್ಕುಗಳನ್ನು ವಾಟ್ಸ್ಆ್ಯಪ್ ಆಕ್ರಮಿಸುತ್ತಿದೆ ಎಂದೂ ಸಿಎಐಟಿ ಆರೋಪಿಸಿದೆ.
ವಾಟ್ಸ್ಆ್ಯಪ್ ನಿಯಂತ್ರಣಕ್ಕೆ ಭಾರತ ಒಕ್ಕೂಟವು ಮಾರ್ಗಸೂಚಿಗಳನ್ನು ರೂಪಿಸಬೇಕು ಮತ್ತು ನಾಗರಿಕ ಮತ್ತು ವ್ಯವಹಾರಗಳ ಗೌಪ್ಯತೆ ಕಾಪಾಡಬೇಕೆಂದು ವಿನಂತಿಸಿದೆ. ದೊಡ್ಡ ಟೆಕ್ ಕಂಪನಿಯಾದ ವಾಟ್ಸ್ಆ್ಯಪ್ ಬಳಕೆದಾರರ ಡೇಟಾವನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳಬಹುದು ಎಂಬುದನ್ನು ಈ ಅರ್ಜಿಯಲ್ಲಿ ವಿವರಿಸಲಾಗಿದೆ.
ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ವಾಟ್ಸ್ಆ್ಯಪ್ ಮೈ ವೇ ಅಥವಾ ಹೈ ವೇ ವಿಧಾನವನ್ನು ಅಳವಡಿಸಿಕೊಂಡಿದೆ ಎಂದು ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಭಾರ್ತಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಪ್ರವೀಣ ಖಂಡೇಲ್ವಾಲ್ ಹೇಳಿದ್ದಾರೆ. ಅಲ್ಲದೇ ಭಾರತೀಯರ ಭುಜದ ಮೇಲೆ ಬಂದೂಕು ಇಟ್ಟು ಗುಂಡು ಹಾರಿಸಲು ವಾಟ್ಸ್ಆ್ಯಪ್ ಯತ್ನಿಸುತ್ತದೆ. ಅನೈತಿಕ ರೀತಿಯಲ್ಲಿ ಲಾಭ ಗಳಿಸಲು ಹೊರಟಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ವಾಟ್ಸ್ಆ್ಯಪ್ ಮೊದಲಿಗೆ ಬಳಕೆದಾರರ ಡೇಟಾವನ್ನು ಹಂಚಿಕೊಳ್ಳದಿರುವ ಭರವಸೆ ನೀಡಿ ಗ್ರಾಹಕರನ್ನು ಆಕರ್ಷಿಸಿತು. 2014ರಲ್ಲಿ ವಾಟ್ಸ್ಆ್ಯಪ್ ಅನ್ನು ಫೇಸ್ಬುಕ್ ಸ್ವಾಧೀನಪಡಿಸಿಕೊಂಡ ನಂತರ ಬಳಕೆದಾರರು ಡೇಟಾದ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಅದಾಗ್ಯೂ ಕಂಪನಿ ಯಾವುದೇ ರೀತಿಯ ಡೇಟಾ ಹಂಚಿಕೊಳ್ಳಲ್ಲ ಎಂದು ಸ್ಪಷ್ಟನೆ ನೀಡಿತು.