ನವದೆಹಲಿ: ಕೇಂದ್ರ ಸರ್ಕಾರ 2023- 24ನೇ ಸಾಲಿನ ಮಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಿಸಿದೆ. ಜೋಳ, ರಾಗಿ, ಮೆಕ್ಕೆಜೋಳ, ಹೆಸರು, ತೊಗರಿ, ಭತ್ತ, ಸೂರ್ಯಕಾಂತಿ ಹಾಗೂ ಎಣ್ಣೆ ಕಾಳುಗಳ ಎಂಎಸ್‌ಪಿಯನ್ನು ಶೇ.6ರಿಂದ 7ರವರೆಗೆ ಹೆಚ್ಚಿಸಲಾಗಿದೆ. ಪ್ರತಿ ಭತ್ತದ ಬೆಲೆ ಕ್ವಿಂಟಲ್‌ಗೆ 143 ರೂ. ಏರಿಕೆ ಮಾಡಲಾಗಿದೆ. ಇದರಿಂದ ಕನಿಷ್ಠ ಬೆಲೆ ಕ್ವಿಂಟಲ್‌ಗೆ 2,183 ರೂ.ಗೆ ತಲುಪಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು (ಸಿಸಿಇಎಸ್) 2023- 24ನೇ ಎಲ್ಲ ಖಾರಿಫ್ ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಳ ಸಂಬಂಧ ಅನುಮೋದನೆ ನೀಡಿತು. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್, "ಕೃಷಿಯಲ್ಲಿ ನಾವು ಸಿಎಸಿಪಿ (ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ) ಶಿಫಾರಸುಗಳನ್ನು ಆಧರಿಸಿ ಕಾಲಕಾಲಕ್ಕೆ ಎಂಎಸ್‌ಪಿ ನಿಗದಿಪಡಿಸುತ್ತಿದ್ದೇವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಖಾರಿಫ್ ಬೆಳೆಗಳ ಎಂಎಸ್‌ಪಿ ಜಾಸ್ತಿಯಾಗಿದೆ. ಚಿಲ್ಲರೆ ಹಣದುಬ್ಬರ ಕುಸಿತ ಪ್ರವೃತ್ತಿಯಲ್ಲಿರುವ ಈ ಸಂದರ್ಭದಲ್ಲಿ ಎಂಎಸ್‌ಪಿ ಹೆಚ್ಚಳದಿಂದ ರೈತರಿಗೆ ಲಾಭವಾಗಲಿದೆ" ಎಂದು ಹೇಳಿದರು.
ಭತ್ತದ ಎಂಎಸ್‌ಪಿಯನ್ನು 2023- 24ರ ಬೆಳೆ ವರ್ಷಕ್ಕೆ ಕ್ವಿಂಟಲ್‌ಗೆ 143 ರೂಪಾಯಿ ಹೆಚ್ಚಿಸಲಾಗಿದೆ. ಇದರಿಂದ ಸಾಮಾನ್ಯ ದರ್ಜೆಯ ಭತ್ತದ ಬೆಂಬಲ ಬೆಲೆ ಕ್ವಿಂಟಲ್‌ಗೆ 2,040ರಿಂದ 2,183 ರೂ., ಎ ದರ್ಜೆಯ ಬೆಲೆ 2,060ರಿಂದ 2,203 ರೂ.ಗೆ ಏರಿಕೆಯಾಗಲಿದೆ. ಇದೇ ವೇಳೆ ಹೆಸರು ಕಾಳುಗಳ ಕನಿಷ್ಠ ಬೆಂಬಲ ಬೆಲೆಯಲ್ಲಿ ಈ ಬಾರಿ ಅತ್ಯಧಿಕ ಎಂದರೆ ಪ್ರತಿ ಕ್ವಿಂಟಲ್‌ಗೆ ಶೇ.10.4ರಷ್ಟು ಹೆಚ್ಚಳವಾಗಿದೆ.
ಅಲ್ಲದೇ, ಪ್ರತಿ ಕ್ವಿಂಟಲ್‌ಗೆ ಹೆಸರು ಕಾಳುಗಳ ಬೆಲೆ 8,558 ರೂ.ಗೆ ನಿಗದಿ ಮಾಡಲಾಗಿದೆ. ಹಿಂದಿನ ವರ್ಷದಲ್ಲಿ ಹೆಸರು ಕ್ವಿಂಟಲ್‌ಗೆ 7,755 ರೂ. ಆಗಿತ್ತು. ತೊಗರಿ ಬೆಲೆ ಪ್ರತಿ ಕ್ವಿಂಟಲ್‌ಗೆ 6,600ರಿಂದ 7,000 ರೂಪಾಯಿಗೆ ಹೆಚ್ಚಿಸಲಾಗಿದೆ. ಉದ್ದು ಬೆಳೆ 6,600ರಿಂದ 6,950 ರೂಪಾಯಿಗೆ ಏರಿಸಲಾಗಿದೆ. ಸಜ್ಜೆ ಬೆಳೆ ಪ್ರತಿ ಕ್ವಿಂಟಲ್‌ಗೆ 2,350ರಿಂದ 2,500 ರೂ., ರಾಗಿ ಬೆಳೆ 3,578ರಿಂದ 3,846 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಎಳ್ಳು ಬೀಜಗಳ ಬೆಂಬಲ ಬೆರೆ ಶೇ.10.3ರಷ್ಟು, ಹತ್ತಿ ಎಂಎಸ್‌ಪಿ ಶೇ.10ರಷ್ಟು ಹಾಗೂ ಶೇಂಗಾ ಕಾಳುಗಳ ಬೆಂಬಲ ಬೆಲೆ ಶೇ.9ರಷ್ಟು ಏರಿಸಲಾಗಿದೆ.
ಇದನ್ನೂ ಓದಿ: ಅಕಾಲಿಕ ಮಳೆಗೆ 5 ಲಕ್ಷ ಹೆಕ್ಟೇರ್‌ಗೂ ಅಧಿಕ ಗೋಧಿ ಬೆಳೆ ಹಾನಿ