ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ದೇಶದಲ್ಲಿನ 80 ಕೋಟಿ ಬಡವರಿಗೆ ಉಚಿತ ಆಹಾರ ಧಾನ್ಯ ನೀಡುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ಈ ಮಹತ್ವದ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಇದನ್ನೂ ಓದಿ: ಪ್ರಭಾಸ್ 'ಆದಿಪುರುಷ್' ಚಿತ್ರದಲ್ಲಿ ಸುದೀಪ್.. ಈ ಪಾತ್ರಕ್ಕಾಗಿ ಕಿಚ್ಚನ ಸಂಪರ್ಕಿಸಿದ ಚಿತ್ರತಂಡ!?
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ(ಪಿಎಂಜಿಕೆಎವೈ) ಅಡಿ ಮುಂದಿನ ಎರಡು ತಿಂಗಳ ಕಾಲ(ಮೇ, ಜೂನ್) 80 ಕೋಟಿ ಬಡವರಿಗೆ ಉಚಿತ ಆಹಾರ ಧಾನ್ಯ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಅದಕ್ಕೆ ಇಂದಿನ ಸಂಪುಟ ಸಭೆಯಲ್ಲಿ ಸಮ್ಮತಿ ನೀಡಲಾಗಿದೆ. ಮೇ. 1ರಿಂದ ಎರಡು ತಿಂಗಳ ಕಾಲ ಹೆಚ್ಚವರಿಯಾಗಿ 5 ಕೆಜಿ ಆಹಾರ ಧಾನ್ಯ ನೀಡುವ ಯೋಜನೆ ಇದಾಗಿದ್ದು, ಇದರಲ್ಲಿ ಅಕ್ಕಿ, ಗೋಧಿ ನೀಡಲಾಗುವುದು.
ದೇಶದಲ್ಲಿ ಕಳೆದ ಕೆಲ ದಿನಗಳಿಂದ ನಿತ್ಯ ಲಕ್ಷಾಂತರ ಕೋವಿಡ್ ಪ್ರಕರಣ ದಾಖಲಾಗುತ್ತಿದ್ದು, ಅನೇಕರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಸಿವಿನಿಂದ ಯಾವುದೇ ವ್ಯಕ್ತಿ ತೊಂದರೆಗೊಳಗಾಗಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೊಳಿಸಿದೆ.