ನವದೆಹಲಿ: ದೇಶದ ಬುಡಕಟ್ಟು ಪ್ರದೇಶಗಳಲ್ಲಿ 33,822 ಕೋಟಿ ರೂ. ವೆಚ್ಚದಲ್ಲಿ 32,152 ಕಿ.ಮೀ ರಸ್ತೆಗಳ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಬುಡಕಟ್ಟು ಮತ್ತು ಭಯೋತ್ಪಾದಕ ಪೀಡಿತ ಪ್ರದೇಶಗಳಲ್ಲಿ ಈ ರಸ್ತೆಗಳ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಈ ರಸ್ತೆಗಳನ್ನು ಕಾಡುಗಳು, ಪರ್ವತಗಳು ಮತ್ತು ನದಿಗಳ ಮೇಲೆ ನಿರ್ಮಿಸಲಾಗುತ್ತದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಕೇಂದ್ರ ಸಚಿವ ಸಂಪುಟ ಸಭೆ ಬಳಿಕ ಮಾಹಿತಿ ನೀಡಿದ ಅವರು, ಬುಡಕಟ್ಟು ಪ್ರದೇಶದ 7,287 ಹಳ್ಳಿಗಳಲ್ಲಿ ಟೆಲಿಕಾಂ ಟವರ್‌ಗಳನ್ನು ಸ್ಥಾಪಿಸಲು ಮತ್ತು ಸಂಪರ್ಕವನ್ನು ಹೆಚ್ಚಿಸಲು ಸಚಿವ ಸಂಪುಟ ಹಸಿರು ನಿಶಾನೆ ತೋರಿದೆ. ಇದಕ್ಕಾಗಿ ಸುಮಾರು 6,466 ಕೋಟಿ ರೂಪಾಯಿ ವ್ಯಯಿಸಲಾಗುತ್ತದೆ. ಈ ಮೊತ್ತವನ್ನು ಯೂನಿವರ್ಸಲ್ ಸರ್ವಿಸ್ ಆಬ್ಲಿಗೇಶನ್ ಫಂಡ್‌ನಿಂದ ಖರ್ಚು ಮಾಡಲಾಗುವುದು ಎಂದು ಹೇಳಿದರು.
ಆಂಧ್ರಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್, ಮಹಾರಾಷ್ಟ್ರ ಮತ್ತು ಒಡಿಶಾದಲ್ಲಿ ಟವರ್‌ಗಳನ್ನು ಸ್ಥಾಪಿಸಲಾಗುವುದು. ಇದರಿಂದ 42 ಜಿಲ್ಲೆಗಳಲ್ಲಿ 4ಜಿ ಸೇವೆಯೊಂದಿಗೆ ಟೆಲಿಕಾಂ ಸಂಪರ್ಕ ಸುಧಾರಿಸಲಿದೆ. ಡಿಜಿಟಲ್ ಇಂಡಿಯಾದ ಗುರಿಗಳನ್ನು ಸಾಧಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಅವರು, ಇದು ವ್ಯಾಪಾರ, ಇ-ಕಾಮರ್ಸ್, ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಸುಧಾರಿಸುತ್ತದೆ ಎಂದರು.
ರಸ್ತೆ ನಿರ್ಮಾಣದಿಂದ ಗ್ರಾಮೀಣಾಭಿವೃದ್ಧಿ
ದೂರದ ಬುಡಕಟ್ಟು ಪ್ರದೇಶಗಳಲ್ಲಿ ರಸ್ತೆ ನಿರ್ಮಾಣದಿಂದ ಗ್ರಾಮೀಣಾಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇವುಗಳಿಂದ ಅನೇಕ ಪ್ರಯೋಜನಗಳಿವೆ. ಸಚಿವ ಸಂಪುಟ ಕೈಗೊಂಡಿರುವ ಈ ನಿರ್ಧಾರದಿಂದ ಭಯೋತ್ಪಾದನೆಯ ಮೇಲೂ ಪರಿಣಾಮ ಬೀರಲಿದೆ. ದೂರದ ಪ್ರದೇಶಗಳಲ್ಲಿ ಟವರ್‌ಗಳ ನಿರ್ಮಾಣದೊಂದಿಗೆ ಸಾಮಾಜಿಕ ಸಬಲೀಕರಣವು ಕೇಂದ್ರ ಸಚಿವ ಸಂಪುಟದ ನಿರ್ಧಾರಗಳಲ್ಲಿ ಒಂದಾಗಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.