ನವದೆಹಲಿ: ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ತೆಲಂಗಾಣದ ಮುನುಗೋಡು ಕ್ಷೇತ್ರದಲ್ಲಿ ತೀವ್ರ ಪೈಪೋಟಿ ನೀಡಿದ್ದ ಬಿಜೆಪಿ ಹಿನ್ನಡೆ ಅನುಭವಿಸಿದ್ದು, ಟಿಆರ್‌ಎಸ್ ಮುನ್ನಡೆ ಕಾಯ್ದುಕೊಂಡಿದೆ.
ಉತ್ತರ ಪ್ರದೇಶದ ಗೋಲ್ ಗೋಕರ್ಣನಾಥ, ಹರಿಯಾಣದ ಆದಂಪುರ, ಒಡಿಶಾದ ಧಮ್‌ನಗರದಲ್ಲಿ ಕಮಲ ಮುನ್ನಡೆಯಲ್ಲಿದೆ. ಹಾಗೆಯೇ ತೆಲಂಗಾಣದ ಮುನುಗೋಡುದಲ್ಲಿ ಟಿಆರ್‌ಎಸ್ ಮುನ್ನಡೆ ಕಾಯ್ದುಕೊಂಡಿದ್ದು ಐದನೇ ಸುತ್ತಿನ ಮತ ಎಣಿಕೆ ಅಂತ್ಯಕ್ಕೆ ಟಿಆರ್‌ಎಸ್ ಅಭ್ಯರ್ಥಿ ಕೂಸುಕುಂಟ್ಲ ಪ್ರಭಾಕರ್ ರೆಡ್ಡಿ 1631 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕೋಮಟಿರೆಡ್ಡಿ ರಾಜ್ ಗೋಪಾಲ ರೆಡ್ಡಿ ಹಿನ್ನಡೆ ಅನುಭವಿಸಿದ್ದಾರೆ. ಬಿಹಾರದ ಮೊಕಾಮಾ ಕ್ಷೇತ್ರದಲ್ಲಿ ಆರ್‌ಜೆಡಿಯ ನೀಲಂ ದೇವಿ, ಮಹಾರಾಷ್ಟ್ರದ ಅಂಧೇರಿ ಪೂರ್ವದಲ್ಲಿ ಉದ್ಧವ್ ಠಾಕ್ರೆ ಅವರ ಶಿವ ಸೇನೆ ಅಭ್ಯರ್ಥಿ ಋತುಜ ಲಟಕೆ ಮುನ್ನಡೆ ಗಳಿಸಿದ್ದಾರೆ.
ಭಾರತೀಯ ಜನತಾ ಪಕ್ಷ ಮತ್ತು ಪ್ರಾದೇಶಿಕ ಪಕ್ಷಗಳಾದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್), ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಬಿಜು ಜನತಾ ದಳ (ಬಿಜೆಡಿ) ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ನ.3 ರಂದು ಬಿಹಾರದ ಮೊಕಾಮಾ ಮತ್ತು ಗೋಪಾಲ್‌ಗಂಜ್ ವಿಧಾನಸಭಾ ಕ್ಷೇತ್ರಗಳು, ಮಹಾರಾಷ್ಟ್ರದ ಅಂಧೇರಿ (ಪೂರ್ವ), ಹರಿಯಾಣದ ಆದಂಪುರ, ತೆಲಂಗಾಣದ ಮುನುಗೋಡು, ಉತ್ತರ ಪ್ರದೇಶದ ಗೋಲಾ ಗೋಕರನಾಥ್ ಮತ್ತು ಒಡಿಶಾದ ಧಮ್‌ನಗರದಲ್ಲಿ ಮತದಾನ ನಡೆದಿತ್ತು.
ಇದನ್ನೂ ಓದಿ: 6 ರಾಜ್ಯಗಳ 7 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ: ನಾಳೆ ಮತದಾನ, ನವೆಂಬರ್ 6ಕ್ಕೆ ಫಲಿತಾಂಶ