ಬಿಕಾನೇರ್(ರಾಜಸ್ಥಾನ): ಮಹಾರಾಷ್ಟ್ರದ ನಾಸಿಕ್ನಲ್ಲಿ ಹಣ ಕದಿಯಲು ಬಂದ ಖದೀಮರು ವಿಫಲವಾಗಿ ಎಟಿಎಂ ಅನ್ನೇ ಎಗರಿಸಿಕೊಂಡು ಹೋದ ಘಟನೆಯ ಬಳಿಕ, ರಾಜಸ್ಥಾನದ ಬಿಕಾನೇರ್‌ನ ಮಾರುಕಟ್ಟೆ ಪ್ರದೇಶದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ಬಿ)ನ ಎಟಿಎಂ ಅನ್ನು ದೋಚಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಜನನಿಬಿಡ ಪ್ರದೇಶವಾದ ನೋಖಾ ಎಂಬಲ್ಲಿನ ಎಟಿಎಂಕ ಕಳ್ಳತನವಾಗಿದ್ದು ಅಚ್ಚರಿಗೆ ಕಾರಣವಾಗಿದೆ. ದರೋಡೆಕೋರರು ಎಷ್ಟು ಪ್ರಮಾಣದ ಹಣವನ್ನು ದೋಚಿದ್ದಾರೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಸೋಮವಾರ ಬೆಳಗ್ಗೆ ಹಣ ತೆಗೆಯಲು ಜನರು ಎಟಿಎಂಗೆ ತೆರಳಿದಾಗ ಕಳ್ಳತನವಾಗಿದ್ದು, ಗೊತ್ತಾಗಿದೆ. ಕೂಡಲೇ ಬ್ಯಾಂಕ್‌ನ ಸಂಬಂಧಪಟ್ಟ ಶಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ನೋಖಾ ಪೊಲೀಸ್ ಠಾಣೆ ಪ್ರಭಾರಿ ಈಶ್ವರ ಪ್ರಸಾದ್ ನೇತೃತ್ವದಲ್ಲಿ ಪೊಲೀಸರ ತಂಡ ಸ್ಥಳಕ್ಕೆ ಆಗಮಿಸಿದೆ. ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಲಾಗಿದೆ. ದರೋಡೆಕೋರರನ್ನು ಹಿಡಿಯಲು ಎಟಿಎಂ ಮತ್ತು ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಈಶ್ವರ್ ಪ್ರಸಾದ್ ತಿಳಿಸಿದ್ದಾರೆ.
ಮಾರುಕಟ್ಟೆ ಪ್ರದೇಶದಲ್ಲಿ ದರೋಡೆ ನಡೆದಿರುವುದು ಪೊಲೀಸರು ಹಾಗೂ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ. ಈ ನಡುವೆ ಅನುಮಾನಾಸ್ಪದ ವಾಹನವೊಂದರ ಸಿಸಿಟಿವಿ ದೃಶ್ಯಾವಳಿಗಳು ಸಿಕ್ಕಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ನಾಸಿಕ್ನಲ್ಲಿ ಎಟಿಎಂ ಸಮೇತ ಜೂಟ್: ಇನ್ನು, ಮಹಾರಾಷ್ಟ್ರದ ನಾಸಿಕ್ನಲ್ಲಿ ಆರ್‌ಪಿಎಫ್ ಕೇಂದ್ರದ ಬಳಿ ಇದ್ದ ಬ್ಯಾಂಕೊಂದರ ಎಟಿಎಂ ಯಂತ್ರವನ್ನೇ ಖದೀಮರು ಕದ್ದೊಯ್ದ ಘಟನೆ ಇತ್ತೀಚೆಗಷ್ಟೇ ನಡೆದಿತ್ತು. ಭಾನುವಾರ ಬೆಳಗ್ಗೆ ಎಟಿಎಂಗೆ ಕನ್ನ ಹಾಕಲು ಬಂದಿದ್ದ ಕಳ್ಳರು ಅದರಿಂದ ಹಣ ಪಡೆದುಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಇದಾಗದು ಎಂದು ತಿಳಿದು ಆ ಎಟಿಎಂ ಯಂತ್ರವನ್ನೇ ವಾಹನದಲ್ಲಿ ಏರಿಸಿಕೊಂಡು ಹೋಗಿದ್ದಾರೆ. ಈ ಘಟನೆಯ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಭಾನುವಾರ ಬೆಳಗಿನ ಜಾವ ಪಿಕ್ ಅಪ್ ವಾಹನದಿಂದ ಬಂದ ನಾಲ್ವರು ಕಳ್ಳರು ಎಟಿಎಂ ಯಂತ್ರವನ್ನೇ ಹೊತ್ತೊಯ್ದಿದ್ದಾರೆ. ಕಳ್ಳತನದ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿಧ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಅಪರಾಧ ತನಿಖಾ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತನಿಖೆ ಆರಂಭಿಸಿದೆ. ಎಟಿಎಂನಲ್ಲಿ ಎಷ್ಟು ಹಣ ಇತ್ತು ಎಂಬ ನಿಖರವಾದ ಮಾಹಿತಿ ಇನ್ನೂ ಸಿಕ್ಕಿಲ್ಲ. ಎಟಿಎಂ ಕದ್ದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಇದನ್ನೂ ಓದಿ: Watch Video: ಹಣ ಕದಿಯಲು ವಿಫಲ.. ಎಟಿಎಂ ಯಂತ್ರವನ್ನೇ ಎಗರಿಸಿದ ಖದೀಮರು!