ಬಾಲಘಾಟ್: ಮಧ್ಯಪ್ರದೇಶದ ಬಾಲಾಘಾಟ್‌ನಲ್ಲಿರುವ ಜೈನ ಮಂದಿರವೊಂದರಲ್ಲಿ ಅ.24 ರಂದು ಕಳ್ಳತನ ನಡೆದಿತ್ತು. ಆದರೆ ಇದೀಗ ಕದ್ದಿದ್ದ ವಸ್ತುಗಳನ್ನೆಲ್ಲ ಆತ ವಾಪಸ್ ಕೊಟ್ಟಿದ್ದಾನೆ. ಜತೆಗೆ ಕ್ಷಮಾಪಣೆ ಪತ್ರವನ್ನೂ ಬರೆದಿದ್ದಾನೆ.
ಅಪರಿಚಿತ ವ್ಯಕ್ತಿ ಅ.24 ರಂದು ಲಮ್ಟಾ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಾಥ ದಿಗಂಬರ ಜೈನ ಮಂದಿರದಿಂದ 'ಛತ್ರ' (ಛತ್ರಿಯ ಆಕಾರದ ಅಲಂಕಾರದ ವಸ್ತು) ಸೇರಿದಂತೆ 10 ಅಲಂಕಾರಿಕ ಬೆಳ್ಳಿಯ ಮತ್ತು ಮೂರು ಹಿತ್ತಾಳೆ ವಸ್ತುಗಳನ್ನು ಕದ್ದಿದ್ದ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ದಾಬರ್ ತಿಳಿಸಿದ್ದಾರೆ.
ಅಂದಿನಿಂದ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದರು. ಆದರೆ ಶುಕ್ರವಾರ, ಜೈನ ಮಂದಿರದ ಪಕ್ಕದಲ್ಲಿರುವ ಪಂಚಾಯತ್ ಭವನದ ಬಳಿ ಚೀಲವೊಂದು ಬಿದ್ದಿರುವುದನ್ನು ಮಂದಿರದ ಆಡಳಿತ ಮಂಡಳಿಯವರು ಗಮನಿಸಿದ್ದಾರೆ. ಅದರಲ್ಲಿ ಕದ್ದ ಮಾಲುಗಳ ಜೊತೆಗೆ ಪತ್ರ ಪತ್ತೆಯಾಗಿದೆ. ಸದ್ಯ ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಕಳ್ಳನಿಗಾಗಿ ಶೋಧ ಮುಂದುವರಿದಿದೆ ಎಂದು ದಾಬರ್ ಹೇಳಿದರು.
ಪತ್ರದಲ್ಲಿ ಕಳ್ಳ ಬರೆದಿದ್ದೇನು?: 'ನನ್ನ ಕೃತ್ಯಕ್ಕಾಗಿ ನಾನು ಕ್ಷಮೆಯಾಚಿಸುತ್ತಿದ್ದೇನೆ. ನಾನು ತಪ್ಪು ಮಾಡಿದೆ, ಕ್ಷಮಿಸಿ. ಕಳ್ಳತನದ ನಂತರ ನಾನು ತುಂಬಾ ನೋವನ್ನು ಅನುಭವಿಸಿದೆ. ಹಾಗಾಗಿ ಈ ವಸ್ತುವನ್ನು ವಾಪಸ್ ನೀಡುತ್ತಿದ್ದೇನೆ. ಈ ವಸ್ತು ಯಾರಿಗೆ ಸಿಕ್ಕರೂ ಅದನ್ನು ಜೈನ ಮಂದಿರಕ್ಕೆ ನೀಡಿ' ಎಂದು ತಿಳಿಸಿದ್ದಾನೆ.
ಇದನ್ನೂ ಓದಿ: ಕದ್ದ ಹಣದಲ್ಲಿ ಶೋಕಿ, ಸ್ವಲ್ಪ ದಾನ ಧರ್ಮ: ಮಡಿವಾಳ ಪೊಲೀಸರಿಂದ ಆರೋಪಿ ಬಂಧನ