ಮುಂಬೈ: ಮುಂಬೈ - ಅಹಮದಾಬಾದ್ ಬುಲೆಟ್ ಟ್ರೈನ್ ಕಾಮಗಾರಿ ಪ್ರಗತಿಯಲ್ಲಿದ್ದು, ಈಗ ಮುಂಬೈ ಮತ್ತು ಹೈದರಾಬಾದ್ ಮಧ್ಯೆ ಅತಿವೇಗದ ರೈಲು ಆರಂಭಿಸಲು ವಿಸ್ತೃತ ಯೋಜನಾ ವರದಿಯನ್ನು(ಡಿಪಿಆರ್) ಸಿದ್ಧಪಡಿಸಿ ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್(ಎನ್‌ಎಚ್‌ಆರ್‌ಸಿಎಲ್)ಗೆ ಸಲ್ಲಿಸಲಾಗಿದೆ.
ಮುಂಬೈ - ಅಹಮದಾಬಾದ್ ಬುಲೆಟ್ ಟ್ರೈನ್ ಕಾಮಗಾರಿ ಮತ್ತೊಮ್ಮೆ ಭರದಿಂದ ಆರಂಭವಾಗಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ನಿಲ್ದಾಣವನ್ನು ಸ್ಥಾಪಿಸಲಾಗುತ್ತಿದೆ. ಆ ನಂತರ ಮುಂಬೈನಿಂದ ಹೈದರಾಬಾದ್‌ಗೆ ಬುಲೆಟ್ ರೈಲು ಆರಂಭಿಸುವ ಕುರಿತು ವರದಿ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಇದು 711 ಕಿಮೀ ಉದ್ದದ ಯೋಜನೆಯಾಗಿದೆ. ಮುಂಬೈನಿಂದ ಹೈದರಾಬಾದ್‌ಗೆ ಪ್ರಯಾಣಿಸಲು ಸದ್ಯ 14 ಗಂಟೆ ಅವಧಿ ಬೇಕಾಗುತ್ತದೆ. ಬುಲೆಟ್ ಟ್ರೈನ್ ಆರಂಭದಿಂದ ಇದನ್ನು ಕೇವಲ 3 ಗಂಟೆಗಳಿಗೆ ಇಳಿಸಬಹುದಾಗಿದೆ. ಮಹಾರಾಷ್ಟ್ರದ ಜೊತೆಗೆ ತೆಲಂಗಾಣ ಮತ್ತು ಆಂಧ್ರಪ್ರದೇಶದ ಅಭಿವೃದ್ಧಿಯಲ್ಲಿ ಈ ಮಾರ್ಗವು ಅತ್ಯಂತ ಮಹತ್ವದ್ದಾಗಿದೆ.
ಯೋಜನೆಯು ಮುಂಬೈ, ಥಾಣೆ, ನವಿ ಮುಂಬೈ, ಲೋನಾವ್ಲಾ, ಪುಣೆ, ಬಾರಾಮತಿ, ಪಂಢರಪುರ, ಸೊಲ್ಲಾಪುರ, ಕಲಬುರಗಿ, ವಿಕಾರಾಬಾದ್ ಮತ್ತು ಹೈದರಾಬಾದ್ ಸೇರಿದಂತೆ 11 ರೈಲು ನಿಲ್ದಾಣಗಳನ್ನು ಒಳಗೊಂಡಿರುತ್ತದೆ. ಥಾಣೆ ಜಿಲ್ಲೆಯಲ್ಲಿ 9 ಕಿ.ಮೀ ಮಾರ್ಗವಿರುತ್ತದೆ. ಈ ಮಾರ್ಗವು ಪುಣೆ ಜಿಲ್ಲೆಯ ಮೂಲಕ ಹಾದುಹೋಗುತ್ತದೆ. ಪುಣೆಯಲ್ಲಿ ಮೂರು ಪ್ರಮುಖ ನಿಲ್ದಾಣಗಳನ್ನು ನಿರ್ಮಿಸುವ ಉದ್ದೇಶವಿದೆ.
ಈ ಮಾರ್ಗದಲ್ಲಿ ಬುಲೆಟ್ ರೈಲು ಗಂಟೆಗೆ 350 ಕಿ.ಮೀ ವೇಗದಲ್ಲಿ ಓಡಿಸಲು ಯೋಜಿಸಲಾಗಿದೆ. ಸರಾಸರಿ ವೇಗ ಗಂಟೆಗೆ 250 ಕಿ.ಮೀ ಇರುತ್ತದೆ. ಟ್ರ್ಯಾಕ್ ಸ್ಟ್ಯಾಂಡರ್ಡ್ ಗೇಜ್ ಅಳವಡಿಸಲಾಗುತ್ತದೆ. ರೈಲಿನಲ್ಲಿ ಒಮ್ಮೆಗೆ 750 ಜನರು ಪ್ರಯಾಣಿಸಬಹುದಾಗಿದೆ.
ಮುಂಬೈ- ಪುಣೆ- ಹೈದರಾಬಾದ್ ಬುಲೆಟ್ ರೈಲು ಯೋಜನೆಗೆ 2021 ರ ಮೇ ತಿಂಗಳಿನಲ್ಲಿ ಡಿಪಿಆರ್ ತಯಾರಿ ಆರಂಭಿಸಲಾಗಿದೆ. ಹೈಪರ್ ಲೂಪ್ ಯೋಜನೆಯನ್ನು ರೂಪಿಸಲಾಗಿತ್ತು. ಬಳಿಕ ಅದನ್ನು ರದ್ದುಗೊಳಿಸಲಾಯಿತು.
ಅತ್ಯಾಧುನಿಕ ವೈಮಾನಿಕ ಲಿಡಾರ್ನಿಂದ ಸಮೀಕ್ಷೆ ನಡೆಸಲಾಗಿದೆ. ವರದಿಯನ್ನು ರಾಷ್ಟ್ರೀಯ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ಗೆ (NHRCL) ಸಲ್ಲಿಸಲಾಗಿದ್ದು, ರೈಲ್ವೆ ಸಚಿವಾಲಯದ ಅನುಮೋದನೆಯ ನಂತರ ಬುಲೆಟ್ ರೈಲಿನ ಕಾಮಗಾರಿ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಓದಿ: ಭಾರತದ ಪಟಾಕಿ ಕೇಂದ್ರ ಶಿವಕಾಶಿಗೆ ಡಬಲ್ ಹೊಡೆತ: ಶೇ.40ರಷ್ಟು ಉತ್ಪಾದನೆ ಕುಸಿತ