ಮುಜಾಫರ್ ನಗರ (ಯುಪಿ): ಒಂದೆಡೆ ಭೂಮಾಫಿಯಾ, ಒತ್ತುವರಿ ಮಾಫಿಯಾಗಳ ಮೇಲೆ ಬಾಬಾರ ಬುಲ್ಡೋಜರ್ ಘರ್ಜಿಸುತ್ತಿದೆ. ಮತ್ತೊಂದೆಡೆ, ಅಭಿವೃದ್ಧಿಯ ಹಾದಿಯಲ್ಲಿ ಬರುವ ಅಡೆತಡೆಗಳ ಮೇಲೂ ಬುಲ್ಡೋಜರ್ ಕ್ರಮ ನಡೆದಿದೆ. ಮುಜಾಫರ್‌ನಗರ ಜಿಲ್ಲೆಯಲ್ಲಿ ಇಂಥದೊಂದು ಕ್ರಮ ಜರುಗಿಸಲಾಗಿದ್ದು, ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯಾಗುತ್ತಿದ್ದ ದೇವಸ್ಥಾನ ಮತ್ತು ಮಜಾರ್ ಎರಡರ ಮೇಲೂ ಬುಲ್ಡೋಜರ್ ಕಾರ್ಯಾಚರಣೆ ಮಾಡಲಾಗಿದೆ.
ಮುಜಾಫರ್ ನಗರದಲ್ಲಿ ಅಭಿವೃದ್ಧಿ ಕೆಲಸಗಳು ವೇಗವಾಗಿ ನಡೆಯುತ್ತಿವೆ. ಪಾಣಿಪತ್ - ಖತಿಮಾ ಹೆದ್ದಾರಿಯಲ್ಲಿ ಹೆದ್ದಾರಿ ನಿರ್ಮಾಣಕ್ಕೆ ಅಡ್ಡಿಯಾಗಿದ್ದ 3 ಧಾರ್ಮಿಕ ಸ್ಥಳಗಳನ್ನು ನೆಲಸಮಗೊಳಿಸಲಾಗಿದೆ. ಎಸ್‌ಡಿಎಂ ಪರಮಾನಂದ ಝಾ ನೇತೃತ್ವದಲ್ಲಿ ದೇವಸ್ಥಾನ ಮತ್ತು ಮಜಾರ್ ಎರಡನ್ನೂ ಕೆಡವಲಾಯಿತು. ಇವುಗಳಲ್ಲಿ 2 ದೇವಾಲಯ ಮತ್ತು 1 ಮಜಾರ್ ಸೇರಿವೆ.
ಮಂಗಳವಾರ ಪೊಲೀಸ್ ಪಡೆಗಳ ಸಮ್ಮುಖದಲ್ಲಿ ಗೋರಿ (ಮಜಾರ್) ಕೆಡವಲಾಯಿತು. ಅಲ್ಲದೇ ತಿತಾವಿ ಪೊಲೀಸ್ ಠಾಣೆಯಲ್ಲಿ ಸ್ಥಾಪಿಸಲಾಗಿದ್ದ ದೇವಸ್ಥಾನವನ್ನು ಕೂಡ ಬುಲ್ಡೋಜರ್ ಮೂಲಕ ಧ್ವಂಸಗೊಳಿಸಲಾಗಿದೆ. ಸರಕಾರಿ ಜಮೀನಿನಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ್ದರಿಂದ ಅದನ್ನು ಕೆಡವಲಾಗಿದೆ. ಇನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಮಜಾರ್ ನಿರ್ಮಿಸಲಾಗಿತ್ತು ಎಂದು ಪರಮಾನಂದ ಝಾ ಹೇಳಿದ್ದಾರೆ.
ಪಾಣಿಪತ್ - ಖತಿಮಾ ರಸ್ತೆಯ ತಿತಾವಿಯಲ್ಲಿರುವ ಅಲಿ ಅಲಿಯಾಸ್ ಮೆಹರ್ ಸಿಂಗ್ ಸಮಾಧಿ ನೂರಾರು ವರ್ಷಗಳಿಂದ ಹಿಂದೂ-ಮುಸ್ಲಿಂ ನಂಬಿಕೆಯ ಕೇಂದ್ರವಾಗಿದೆ. ಪ್ರತಿ ವರ್ಷ ದೀಪಾವಳಿಯ ಸಂದರ್ಭದಲ್ಲಿ ಮಜಾರ್ ನಲ್ಲಿ ಜಾತ್ರೆ ನಡೆಯುತ್ತಿದ್ದು, ಸಾವಿರಾರು ಜನ ಬರುತ್ತಿದ್ದರು. ಕೆಲ ವರ್ಷಗಳ ಹಿಂದೆ, ಪಾಣಿಪತ್-ಖತಿಮಾ ರಸ್ತೆಯ ಅಗಲೀಕರಣ ಪ್ರಸ್ತಾಪಿಸಲಾಗಿತ್ತು. ರಸ್ತೆ ಅಗಲೀಕರಣಕ್ಕೆ ಗೋರಿ ಅಡ್ಡಿಯಾಗಿತ್ತು. ಮಂಗಳವಾರ ಎಸ್‌ಡಿಎಂ ಪರಮಾನಂದ ಝಾ ಮತ್ತು ಠಾಣಾ ಪ್ರಭಾರಿ ಇನ್‌ಸ್ಪೆಕ್ಟರ್ ಸಮ್ಮುಖದಲ್ಲಿ ಗೋರಿಯನ್ನು ಕೆಡವಲಾಯಿತು.
ಇದನ್ನೂ ಓದಿ: ಗ್ಯಾಂಗ್ರೇಪ್ ಆರೋಪಿಗಳ ಮನೆಯನ್ನು ಜೆಸಿಬಿಯಿಂದ ಧ್ವಂಸಗೊಳಿಸಿದ ಜಿಲ್ಲಾಡಳಿತ