ಬುಲಂದ್ಶಹರ್ (ಉತ್ತರ ಪ್ರದೇಶ): ಆಗಸ್ಟ್ನಲ್ಲಿ ನಡೆದ 15 ವರ್ಷದ ದಲಿತ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿ ಕುಟುಂಬಕ್ಕೆ ಭದ್ರತೆ ಒದಗಿಸುವಲ್ಲಿ ನಿರ್ಲಕ್ಷ್ಯ ತೋರಿದ ಆರೋಪದಡಿ ಬುಲಂದ್ಶಹರ್ ಸರ್ಕಲ್ ಅಧಿಕಾರಿ (ಸಿಒ) ಅತುಲ್ ಚೌಬೆರನ್ನು ಅಮಾನತು ಮಾಡಲಾಗಿದೆ.
ಅತ್ಯಾಚಾರ ನಡೆಸಿದ್ದ ಆರೋಪಿ ಮೇಲೆ ಜಹಾಂಗೀರಾಬಾದ್‌ನ ಸಂತ್ರಸ್ತೆ ಪೋಷಕರು ಪ್ರಕರಣ ದಾಖಲಿಸಿದ್ದರು. ಆದರೆ, ಆರೋಪಿಯ ಸಂಬಂಧಿಕರು ಪ್ರಕರಣ ಹಿಂಪಡೆಯುವಂತೆ ಕುಟುಂಬಕ್ಕೆ ಬೆದರಿಕೆ ಹಾಕಿದ್ದರು. ಅದು ಮುಂದುವರೆದು 7 ಮಂದಿ ಮಂಗಳವಾರ (ನ.17) ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಬಾಲಕಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ದೆಹಲಿಯ ಆರ್ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅತ್ಯಾಚಾರ ಸಂತ್ರಸ್ತೆ ಮಂಗಳವಾರ ತಡರಾತ್ರಿ ಮೃತಪಟ್ಟಿದ್ದು, ಮೃತದೇಹವನ್ನು ನಿನ್ನೆ ತಡರಾತ್ರಿ ಸಿದ್ದನಾಗ್ಲ ಗ್ರಾಮದಲ್ಲಿ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿದರು.
ಇದನ್ನೂ ಓದಿ...ದಲಿತ ಯುವತಿ ಮೇಲೆ ಅತ್ಯಾಚಾರ: ಪ್ರಕರಣ ಹಿಂಪಡೆಯದ್ದಕ್ಕೆ ಬೆಂಕಿಯಿಟ್ಟು ಕೊಂದರು!
ಆರೋಪಿ ಬೆಂಬಲಿತರು ನಮ್ಮ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗೂ ಸಂತ್ರಸ್ತೆ ಪೋಷಕರು ಮನವಿ ಮಾಡಿಕೊಂಡಿದ್ದರು. ಭದ್ರತೆ ಒದಗಿಸುವುದಾಗಿ ಅವರೂ ಭರವಸೆ ಕೊಟ್ಟಿದ್ದರು. ಹಾಗೆಯೇ ಭದ್ರತೆ ಒದಗಿಸಿಕೊಡುವಂತೆ ಅತುಲ್ಚೌಬೆಗೆ ಆದೇಶಿಸಿದ್ದರೂ ನಿರ್ಲಕ್ಷ್ಯ ತೋರಿದ್ದರು ಎನ್ನಲಾಗ್ತಿದೆ.
ರಕ್ಷಣೆ ನೀಡಬೇಕಾದ ಅಧಿಕಾರಿ ಬೇಜವಾಬ್ದಾರಿ ತೋರಿದ ಪರಿಣಾಮ ನಮ್ಮ ಮಗಳನ್ನು ಕಳೆದುಕೊಂಡೆವು ಎಂದು ಸಂತ್ರಸ್ತೆ ಕುಟುಂಬ ಅಸಮಾಧಾನ ವ್ಯಕ್ತಪಡಿಸಿದೆ. ಹೀಗಾಗಿ ನಿರ್ಲಕ್ಷ್ಯ ತೋರಿದ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಸರ್ಕಾರದಿಂದ ನೀಡಬೇಕಾಗಿದ್ದ ಹಣಕಾಸಿನ ನೆರವನ್ನು ಮೃತರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಮೃತ ಬಾಲಕಿ ಕೋವಿಡ್ ವರದಿ ನೆಗೆಟಿವ್ ಬಂದಿದೆ.