ನವದೆಹಲಿ: 2023-24ರ ವಿತ್ತೀಯ ವರ್ಷಕ್ಕೆ ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪ್ರಧಾನಿ ವಿಶ್ವಕರ್ಮ ಕೌಶಲ್ ಸಮ್ಮಾನ್ (ಪಿಎಂ-ವಿಕಾಸ್) ಯೋಜನೆಯಡಿ ದೇಶದ ಚಿತ್ರಕಲಾವಿದರು ಮತ್ತು ಕರಕುಶಲಕರ್ಮಿಗಳ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ನೀಡಿದ್ದಾರೆ. "ಇದೇ ಮೊದಲ ಬಾರಿಗೆ ದೇಶದ ವಿಶ್ವಕರ್ಮರು ಎಂದು ಕರೆಯಲ್ಪಡುವ ಚಿತ್ರಕಲಾವಿದರು ಮತ್ತು ಕುಶಲಕರ್ಮಿಗಳ ಅಭಿವೃದ್ಧಿಗಾಗಿ ಪ್ಯಾಕೇಜ್ ಕಲ್ಪಿಸಲಾಗಿದೆ" ಎಂದು ವಿತ್ತ ಸಚಿವೆ ಹೇಳಿದರು.
"ಸಾಂಪ್ರದಾಯಿಕವಾಗಿ ತಮ್ಮ ಕೈಗಳಿಂದಲೇ ಕೆಲಸ ಮಾಡುವ ಚಿತ್ರಕಲಾವಿದರು, ಕರಕುಶಲಕರ್ಮಿಗಳು ಭಾರತಕ್ಕೆ ಯುಗಯುಗಾಂತರಗಳಿಂದ ಕೀರ್ತಿ ತಂದಿದ್ದಾರೆ. 'ಆತ್ಮನಿರ್ಭರ ಭಾರತ'ದ ನಿಜವಾದ ಚೈತನ್ಯವನ್ನು ಪ್ರತಿನಿಧಿಸುವವರು ಈ ಕರಕುಶಲಕರ್ಮಿಗಳು. ಈ ವಿಶ್ವಕರ್ಮ ಕೌಶಲ್ ಸಮ್ಮಾನ್ ಹೊಸ ಯೋಜನೆಯು ಅವರ ಉತ್ಪನ್ನಗಳ ಪ್ರಮಾಣ ಮತ್ತು ಗುಣಮಟ್ಟವನ್ನು ಸುಧಾರಿಸಲು ಅನುವು ಮಾಡಿಕೊಡುತ್ತದೆ. ಅವುಗಳನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಮೌಲ್ಯ ಸರಪಳಿಯೊಂದಿಗೆ ಸಂಯೋಜಿಸಲು ದಾರಿ ಮಾಡಿಕೊಡುತ್ತದೆ" ಎಂದು ಸಚಿವೆ ಅಭಿಪ್ರಾಯಪಟ್ಟರು.
ವಿಶ್ವಕರ್ಮರು ತಮ್ಮ ಸಣ್ಣ ಪ್ರಮಾಣದ ವ್ಯವಹಾರಗಳನ್ನು ಹೆಚ್ಚಿಸಲು ಹಣಕಾಸಿನ ನೆರವು, ಆಧುನಿಕ ಕೌಶಲ್ಯ ತರಬೇತಿ, ಆಧುನಿಕ ವ್ಯವಸ್ಥೆಯ ಜ್ಞಾನ, ಶಾಖೆಗಳ ಪ್ರಚಾರ, ಜಾಗತಿಕ ಮತ್ತು ಸ್ಥಳೀಯ ಮಾರುಕಟ್ಟೆಯೊಂದಿಗೆ ಸಂಪರ್ಕ, ಡಿಜಿಟಲ್ ಪಾವತಿ ಮತ್ತು ಸಾಮಾಜಿಕ ಭದ್ರತೆಯನ್ನು ಈ ಯೋಜನೆಯ ಅಡಿಯಲ್ಲಿ ಪಡೆಯುತ್ತಾರೆ. ಇದು ಎಸ್‌ಸಿ, ಎಸ್‌ಟಿ, ಒಬಿಸಿ, ಮಹಿಳೆಯರು ಮತ್ತು ಸಮಾಜದ ದುರ್ಬಲ ವರ್ಗದ ಜನರಿಗೆ ಉಪಯೋಗವಾಗಲಿದೆ" ಎಂದು ಸಚಿವೆ ತಿಳಿಸಿದರು.
"ದೇಶದಲ್ಲಿ ಬೃಹತ್ ಆರ್ಥಿಕ ಸ್ಥಿರತೆಯ ಬಲವರ್ಧನೆಯ ಮೇಲೆ ಕೇಂದ್ರೀಕರಿಸಿದ ಮಹಿಳೆಯರ ಆರ್ಥಿಕ ಸಬಲೀಕರಣದ ಮಹತ್ವವನ್ನು ಸೀತಾರಾಮನ್ ಒತ್ತಿ ಹೇಳಿದರು. ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ (DAY-NULM) ಅಡಿಯಲ್ಲಿ ಸ್ವಸಹಾಯ ಗುಂಪುಗಳಾಗಿ ಸಜ್ಜುಗೊಂಡ ಹಲವಾರು ಗ್ರಾಮೀಣ ಮಹಿಳೆಯರು ತಮ್ಮ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ಅತ್ಯುತ್ತಮ ಸೌಲಭ್ಯಗಳನ್ನು ನೀಡಲಾಗುವುದು."
"ದೀನ್ ದಯಾಳ್ ಉಪಾಧ್ಯಾಯ ಅಂತ್ಯೋದಯ ಯೋಜನೆ ಅಡಿಯಲ್ಲಿ ಇದುವರೆಗೆ 81 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳಾಗಿ ದೇಶದ ಗ್ರಾಮೀಣ ಪ್ರದೇಶಗಳ ಅನೇಕ ಮಹಿಳೆಯರನ್ನು ಸಜ್ಜುಗೊಳಿಸಲಾಗಿದೆ ಮತ್ತು ಅವರ ವ್ಯವಹಾರಗಳನ್ನು ವಿಸ್ತರಿಸಲು ಸರ್ಕಾರದಿಂದ ಎಲ್ಲಾ ರೀತಿಯ ಬೆಂಬಲವನ್ನು ನೀಡಲಾಗುವುದು."
"ದೊಡ್ಡ ಉತ್ಪಾದನಾ ಉದ್ಯಮಗಳು ಅಥವಾ ಸಮೂಹಗಳ ರಚನೆಯ ಮೂಲಕ ಈ ಗುಂಪುಗಳು ಆರ್ಥಿಕ ಸಬಲೀಕರಣದ ಮುಂದಿನ ಹಂತ ತಲುಪಲು ಯೋಜನೆ ಸಹಾಯ ಮಾಡುತ್ತದೆ. ಇಂತಹ ಹೆಚ್ಚಿನ ಪ್ರಮಾಣದ ಗ್ರಾಮೀಣ ಮಹಿಳೆಯರು ಯೋಜನೆ ಪಡೆಯಲು ಮುಂದೆ ಬರುತ್ತಿದ್ದು, ದೀನ್ ದಯಾಳ್ ಉಪಾಧ್ಯಾಯ ಅಂತ್ಯೋದಯ ಯೋಜನೆಯನ್ನು ಗಮನಾರ್ಹವಾಗಿ ಯಶಸ್ವಿಯಾಗಿಸಿದ್ದಾರೆ."
"ಈ ಮಹಿಳೆಯರಿಗೆ ತಮ್ಮ ಉತ್ಪನ್ನಗಳ ಉತ್ತಮ ವಿನ್ಯಾಸ, ಗುಣಮಟ್ಟ, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆಗೆ ಸಹಾಯ ಮಾಡಲು ಕಚ್ಚಾ ವಸ್ತುಗಳ ಪೂರೈಕೆ ಮತ್ತು ಸಂಪನ್ಮೂಲಗಳಿಗೆ ಸಹಾಯ ಮಾಡಲಾಗುವುದು. ಈ ನೀತಿಗಳನ್ನು ಬೆಂಬಲಿಸುವ ಮೂಲಕ ಅವರು ಯುನಿಕಾರ್ನ್‌ಗಳಾಗಿ ಬೆಳೆಯುತ್ತಿರುವ ಹಲವಾರು ಸ್ಟಾರ್ಟ್‌ಅಪ್‌ಗಳಂತೆಯೇ ದೊಡ್ಡ ಗ್ರಾಹಕ ಮಾರುಕಟ್ಟೆಗಳಿಗೆ ಸೇವೆ ಸಲ್ಲಿಸಲು ತಮ್ಮ ಕಾರ್ಯಾಚರಣೆಗಳನ್ನು ಹೆಚ್ಚಿಸಲು ಸಕ್ರಿಯಗೊಳಿಸಲಾಗುತ್ತದೆ" ಎಂದು ಸೀತಾರಾಮನ್ ಹೇಳಿದರು.
ಇದನ್ನೂ ಓದಿ: ಕೇಂದ್ರ ಬಜೆಟ್ 2023: 7 ಲಕ್ಷದ ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ