ನವದೆಹಲಿ: ಪ್ರಧಾನಿ ಮೋದಿಗೆ ಭದ್ರತಾ ಲೋಪದ ಪ್ರಕರಣದ ಕುರಿತು ತನಿಖೆ ನಡೆಯುತ್ತಿರುವಾಗಲೇ ಭದ್ರತಾ ಲೋಪವೆಸಗಲಾಗಿದ್ದ ಪಂಜಾಬ್ನ ಫಿರೋಜ್ಪುರ ಜಿಲ್ಲೆಯ ಗಡಿಭಾಗದ ಔಟ್ ಪೋಸ್ಟ್ ಬಳಿ ಬಿಎಸ್ಎಫ್ ಪಾಕಿಸ್ತಾನದ ದೋಣಿಯನ್ನು ಶುಕ್ರವಾರ ವಶಕ್ಕೆ ಪಡೆದುಕೊಂಡಿದೆ.
ಫಿರೋಜ್ಪುರ ಪಾಕಿಸ್ತಾನದ ಗಡಿಗೆ ಹೊಂದಿಕೊಂಡಂತಿರುವ ಪಂಜಾಬ್ ರಾಜ್ಯದ ಜಿಲ್ಲೆಯಾಗಿದ್ದು, ಭದ್ರತೆಯ ವಿಚಾರದಲ್ಲಿ ಅತ್ಯಂತ ಸೂಕ್ಷ್ಮ ಜಿಲ್ಲೆಯಾಗಿದೆ. ಈ ಮೊದಲು ಪಾಕಿಸ್ತಾನದ ಹಲವು ಡ್ರೋನ್ಗಳು ಈ ಜಿಲ್ಲೆಯಲ್ಲಿ ಹಾರಾಡುತ್ತಿದ್ದು, ಬಿಎಸ್ಎಫ್ ಹಲವು ಬಾರಿ ಈ ಡ್ರೋನ್ಗಳನ್ನು ಹೊಡೆದುರುಳಿಸಿತ್ತು.
ಗಡಿಯಲ್ಲಿರುವ ಡಿಟಿ ಮಾಲ್ ಔಟ್ಪೋಸ್ಟ್ ಬಳಿ ಬಿಎಸ್ಎಫ್ನ 136ನೇ ಬೆಟಾಲಿಯನ್ಗೆ ಸೇರಿದ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಮರದ ದೋಣಿಯನ್ನು ಗಮನಿಸಿ, ಅದನ್ನು ವಶಕ್ಕೆ ಪಡೆದಿದ್ದಾರೆ ಎಂದು ಬಿಎಸ್ಎಫ್ನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಚಳಿಗಾಲವಾದ ಕಾರಣದಿಂದ ಈ ಪ್ರದೇಶದ ಪೂರ್ತಿ ಮಂಜಿನಿಂದ ಕೂಡಿತ್ತು. ದೋಣಿ ವಶಕ್ಕೆ ಪಡೆದ ನಂತರ ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ಕಂಡರೆ ಬಿಎಸ್ಎಫ್ಗೆ ಮಾಹಿತಿ ನೀಡಲು ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಸೂಚನೆ ನೀಡಿದ್ದೇವೆ. ಸಾಮಾನ್ಯವಾಗಿ ಶಸ್ತ್ರಗಳನ್ನು ಮತ್ತು ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲು ಇಂತಹ ಬೋಟ್ಗಳನ್ನು ಬಳಸಲಾಗುತ್ತದೆ ಎಂದು ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಭದ್ರತಾ ಲೋಪದ ತನಿಖೆ: ಪಂಜಾಬ್ ಡಿಜಿಪಿ ಸೇರಿ ಉನ್ನತಾಧಿಕಾರಿಗಳಿಗೆ ನೋಟಿಸ್