ನವ ದೆಹಲಿ: ತ್ಯಾಗ ಬಲಿದಾನಗಳ ಹಬ್ಬ ಈದ್ ಹಿನ್ನೆಲೆಯಲ್ಲಿ ಭಾರತದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರು ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ಸೈನಿಕರಿಗೆ ಸಿಹಿ ನೀಡಿದ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಪುಲ್ವಾಮಾ ದಾಳಿಯ ನಂತರ ಇದೇ ಮೊದಲ ಬಾರಿಗೆ ಭಾರತ, ಪಾಕಿಸ್ತಾನಕ್ಕೆ ಸ್ನೇಹದ ಹಸ್ತ ಚಾಚಿತು.
2019ರ ಫೆಬ್ರವರಿ 14 ರಂದು ನಡೆದಿದ್ದ ಪುಲ್ವಾಮಾ ದಾಳಿಗೂ ಮೊದಲು, ಸಾಮಾನ್ಯವಾಗಿ ಉಭಯ ದೇಶಗಳ ಸೈನಿಕರು ಹೋಳಿ, ದೀಪಾವಳಿ, ಈದ್ ಮುಂತಾದ ಹಬ್ಬಗಳ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಗಡಿಯಲ್ಲಿ ಸಿಹಿತಿಂಡಿ ನೀಡಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದರು. ಪುಲ್ವಾಮಾ ದಾಳಿಯ ನಂತರ, ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿತ್ತು. ಹಬ್ಬಗಳ ಸಮಯದಲ್ಲಿ ಸಿಹಿ ತಿಂಡಿಗಳು ಮತ್ತು ಶುಭಾಶಯಗಳನ್ನು ಹಂಚಿಕೊಳ್ಳುವ ಅಭ್ಯಾಸ ಅಂದೇ ಕೊನೆಗೊಂಡಿತ್ತು.
ಇದನ್ನೂ ಓದಿ: ಜಮ್ಮುನಲ್ಲಿ ಗಡಿ ದಾಟಲು ಯತ್ನಿಸಿದ ಪಾಕ್ ಡ್ರೋಣ್ : ಗುಂಡು ಹಾರಿಸಿದ ಭದ್ರತಾ ಪಡೆ
ಈ ಬಾರಿ ಈದ್ ಸಂದರ್ಭದಲ್ಲಿ ಬಿಎಸ್ಎಫ್ ಈ ಉಪಕ್ರಮವನ್ನು ಕೈಗೊಂಡಿದ್ದು, ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿರುವ ಮುನಾಬಾವೊ ಮತ್ತು ಕೆಲ್ನೋರ್ ಸೇರಿದಂತೆ ಹಲವಾರು ಗಡಿ ಪೋಸ್ಟ್‌ಗಳಿಗೆ ಪಾಕ್ ರೇಂಜರ್‌ಗಳನ್ನು ಕರೆಸಿದ ಬಿಎಸ್ಎಫ್ ಸಿಹಿತಿಂಡಿಗಳನ್ನು ನೀಡಿ ಈದ್ ಶುಭಾಶಯ ವಿನಿಮಯ ಮಾಡಿಕೊಂಡಿತು. ಪಾಕಿಸ್ತಾನ ರೇಂಜರ್ಸ್ ಕೂಡ ಈ ಉಪಕ್ರಮವನ್ನು ಕೈಗೊಂಡಿದ್ದಕ್ಕಾಗಿ ಬಿಎಸ್ಎಫ್‌ಗೆ ಧನ್ಯವಾದ ಸಲ್ಲಿಸಿದ್ದಾರೆ.
ಎರಡು ಪರಮಾಣು ಶಸ್ತ್ರಸಜ್ಜಿತ ದಕ್ಷಿಣ ಏಷ್ಯಾ ರಾಷ್ಟ್ರಗಳ ನಡುವಿನ ಸಂಬಂಧ ಗಣನೀಯವಾಗಿ ಹದಗೆಟ್ಟಿತ್ತು. ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಉಭಯ ದೇಶಗಳ ನಡುವೆ ಕದನ ವಿರಾಮ ಒಪ್ಪಂದವನ್ನೂ ಮಾಡಿಕೊಂಡಿದೆ.