ಪಲಾಮು (ಜಾರ್ಖಂಡ್): ಬಿಎಸ್‌ಎಫ್ ಯೋಧನೊಬ್ಬ ಪಿಡಿಎಸ್ ಡೀಲರ್, ಆತನ ಪತ್ನಿ ಹಾಗೂ ಇಬ್ಬರು ಗ್ರಾಮಸ್ಥರು ಸೇರಿದಂತೆ ಒಟ್ಟು ನಾಲ್ವರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ಪಿಡಿಎಸ್ ಡೀಲರ್ (ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಂಗಡಿಯವ) ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಮೇದಿನಿ ರೈ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜಮೀನು ವಿವಾದದ ಹಿನ್ನೆಲೆ ಕತ್ತಿಯಿಂದ ಹಲ್ಲೆ: ಇಡೀ ಘಟನೆಯು ಪಲಮುವಿನ ಪಾಡ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಗೋಲ್ಹಾನಾದಲ್ಲಿ ನಡೆದಿದೆ. ಮಾಹಿತಿಯ ಪ್ರಕಾರ, ಗೋಲ್ಹಾನಾ ನಿವಾಸಿಯಾದ ಬಿಎಸ್ಎಫ್ ಸೈನಿಕ ಉರ್ಮಿಲ್ ತಿವಾರಿ ಅಲಿಯಾಸ್ ರೂಪೇಶ್ ಹಾಗೂ ಪಿಡಿಎಸ್ ಡೀಲರ್ ಸತ್ಯದೇವ್ ತಿವಾರಿ ಅವರೊಂದಿಗೆ ಜಮೀನು ವಿವಾದ ನಡೆಯುತ್ತಿತ್ತು. ಬಿಎಸ್ಎಫ್ ಯೋಧ ಬೆಳಗ್ಗೆಯಿಂದ ಕತ್ತಿ ಹಿಡಿದು ತಿರುಗಾಡುತ್ತಿದ್ದ. ಮಂಗಳವಾರ ಎರಡು ಗಂಟೆ ಸುಮಾರಿಗೆ ಗ್ರಾಮದ ಪಿಡಿಎಸ್ ಡೀಲರ್ ಸತ್ಯದೇವ್ ತಿವಾರಿ ಅವರ ಮನೆಗೆ ನುಗ್ಗಿ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಈ ದಾಳಿಯಲ್ಲಿ ಪಿಡಿಎಸ್ ಡೀಲರ್ ಸತ್ಯದೇವ್ ತಿವಾರಿ ಮೃತಪಟ್ಟಿದ್ದಾನೆ. ತಿವಾರಿ ಪತ್ನಿ ಮತ್ತು ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎಲ್ಲರ ಮೇಲೆ ಕತ್ತಿ ಹಲ್ಲೆ ಮಾಡಿದ ಬಿಎಸ್ಎಫ್ ಯೋಧ ಸ್ಥಳದಿಂದ ಪರಾರಿಯಾಗಿದ್ದಾನೆ.
ಮೇದಿನಿರೈ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ: ಘಟನೆಯ ನಂತರ ಸ್ಥಳೀಯ ಗ್ರಾಮಸ್ಥರು ಮತ್ತು ಸಂಬಂಧಿಕರು ಗಾಯಾಳುಗಳನ್ನು ಚಿಕಿತ್ಸೆಗಾಗಿ ಮೇದಿನಿರೈ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ದರು. ಪಿಡಿಎಸ್ ಡೀಲರ್ ಸತ್ಯದೇವ್ ತಿವಾರಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಗಂಭೀರವಾಗಿ ಗಾಯಗೊಂಡವರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ.
ಕೊಲೆ ಪ್ರಕರಣದ ಆರೋಪಿಯ ಬಂಧನಕ್ಕೆ ಬಲೆ ಬೀಸಿದ ಪೊಲೀಸರು: ಯೋಧನಿಂದ ಕತ್ತಿಯಿಂದ ನಡೆದ ದಾಳಿಯಲ್ಲಿ ಪಿಡಿಎಸ್ ಡೀಲರ್ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಘಟನೆಯನ್ನು ಖಚಿತಪಡಿಸಿರುವ ಪಡ್ವಾ ಪೊಲೀಸ್ ಠಾಣೆಯ ಉಸ್ತುವಾರಿ ನಕುಲ್ ಕುಮಾರ್ ಶಾ, ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಆರೋಪಿಯನ್ನು ಇಡೀ ಪ್ರದೇಶದಲ್ಲಿ ಶೋಧ ನಡೆಸಲಾಗುತ್ತಿದೆ. ಬಿಎಸ್ಎಫ್ ಸೈನಿಕನನ್ನು ಹಿಡಿಯುವುದು ಪೊಲೀಸರ ಆದ್ಯತೆಯಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿದು ಅಪಾರ ಸಂಖ್ಯೆಯ ಸಂಬಂಧಿಕರು ಆಸ್ಪತ್ರೆಗೆ ಆಗಮಿಸಿದ್ದಾರೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಬಿಹಾರದಲ್ಲಿ ಸಾರಾಯಿ ಮಾಫಿಯಾ: ಗ್ರಾಮಸ್ಥರ ದಾಳಿಗೆ ಅಬಕಾರಿ ಗೃಹರಕ್ಷಕ ದಳದ ಯೋಧ ಬಲಿ