ಶ್ರೀನಗರ(ಜಮ್ಮು ಕಾಶ್ಮೀರ): ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಜಮ್ಮುವಿನ ಸಾಂಬಾ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಣೆ ಯತ್ನವನ್ನು ವಿಫಲಗೊಳಿಸಿದೆ. ಈ ವೇಳೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ಹೇಳಲಾಗಿದ್ದು, ನಾಲ್ಕು ಪಿಸ್ತೂಲ್‌ಗಳು, ಎಂಟು ಪಿಸ್ತೂಲ್ ಮ್ಯಾಗಜೀನ್ಗಳು, 232 ಮದ್ದು ಗುಂಡುಗಳನ್ನು ಜಪ್ತಿ ಮಾಡಲಾಗಿದೆ ಎಂದು ಬಿಎಸ್‌ಎಫ್ ಡಿಐಜಿ ಎಸ್ಪಿಎಸ್ ಸಂಧು ಹೇಳಿದ್ದಾರೆ.
ಇದಕ್ಕೂ ಮೊದಲು ಅಂದರೆ ಶನಿವಾರ ಪಾಕಿಸ್ತಾನದ ಕಡೆಯಿಂದ ಬಂದ ಒಂದು ಡ್ರೋನ್ ಭಾರತದ ಭೂಪ್ರದೇಶದೊಳಗೆ ಬೀಳಿಸಿದ್ದ ಒಂದು ಎಕೆ-47 ರೈಫಲ್, ಮೂರು ಮ್ಯಾಗಜೀನ್ಗಳು ಮತ್ತು 30 ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿತ್ತು.
ಸೆಪ್ಟೆಂಬರ್ 27ರಂದು ಇದೇ ರೀತಿಯ ಕಾರ್ಯಾಚರಣೆ ನಡೆಸಿದ್ದ ಬಿಎಸ್‌ಎಫ್ ಜಮ್ಮುವಿನ ಅಕ್ನೋರ್ ಜಿಲ್ಲೆಯಲ್ಲಿ ನಾಲ್ಕು ಪಿಸ್ತೂಲ್‌ಗಳು, ಎಂಟು ಮ್ಯಾಗಜೀನ್ಗಳು ಮತ್ತು 100 ಸುತ್ತು ಮದ್ದುಗುಂಡುಗಳ ಜೊತೆಗೆ ಸುಮಾರು ಒಂದು ಕೆಜಿ ತೂಕದ ಮಾದಕ ವಸ್ತುಗಳನ್ನು ಜಪ್ತಿ ಮಾಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದರು.
ಇದನ್ನೂ ಓದಿ: ದುಷ್ಕರ್ಮಿಗಳ ಅಟ್ಟಹಾಸ.. ಶ್ರೀನಗರದ ಶಾಲೆಯಲ್ಲಿ ಓರ್ವ ಕಾಶ್ಮೀರಿ ಪಂಡಿತ ಸೇರಿ ಇಬ್ಬರು ಶಿಕ್ಷಕರ ಹತ್ಯೆ