ಅಮೃತಸರ: ಪಂಜಾಬ್‌ನಲ್ಲಿನ ಅಂತಾರಾಷ್ಟ್ರೀಯ ಗಡಿಯ ಮೂಲಕ ಭಾರತದೊಳಗೆ ಪ್ರವೇಶಿಸಿದ ಆರು ಮಂದಿ ಪಾಕಿಸ್ತಾನಿ ಪ್ರಜೆಗಳನ್ನು ಶುಕ್ರವಾರ ಬಂಧಿಸಿರುವುದಾಗಿ ಬಿಎಸ್‌ಎಫ್ ಖಚಿತಪಡಿಸಿದೆ. ಅವರಿಂದ ಯಾವುದೇ ಶಸ್ತ್ರಾಸ್ತ್ರಗಳು ಅಥವಾ ಅನುಮಾನಾಸ್ಪದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿಲ್ಲ. ಆದರೆ ಪೊಲೀಸರು ಸೇರಿದಂತೆ ಎಲ್ಲ ಭಾರತೀಯ ಭದ್ರತಾ ಏಜೆನ್ಸಿಗಳು ಪಾಕಿಸ್ತಾನಿ ಪ್ರಜೆಗಳ ವಿಚಾರಣೆಯನ್ನು ಮುಂದುವರಿಸಿದ್ದಾರೆ ಎಂದು ಹೇಳಿದೆ.
ಸಂಜೆ 5 ಗಂಟೆ ಸುಮಾರಿಗೆ ಅಮೃತಸರದ ಗಡಿ ಪ್ರದೇಶದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: 11 ಶಿಯಾ ಮುಸ್ಲಿಮರನ್ನು ಗುಂಡಿಕ್ಕಿ ಹತ್ಯೆಗೈದಿರುವುದನ್ನು ವಿರೋಧಿಸಿ ಪ್ರತಿಭಟನೆ
ಬಂಧಿತರಲ್ಲಿ ಕೆಲವರು ಅಪ್ರಾಪ್ತ ವಯಸ್ಸಿನವರಾಗಿರಬಹುದು ಎಂಬ ಸಂಶಯಗಳಿವೆ. ಈ ಆರು ಜನ ದಾರಿ ತಪ್ಪಿ ಗಡಿಯನ್ನು ಪ್ರವೇಶಿಸಿದ್ದಾರೆಯೇ ಅಥವಾ ಉದ್ದೇಶಪೂರ್ವಕವಾಗಿಯೇ ನುಸುಳಿದ್ದಾರೆಯೇ ಎಂಬುದರ ಬಗ್ಗೆ ವಿಚಾರಣೆ ನಡೆದಿದೆ. ಆರು ಜನರನ್ನು, ಭದ್ರತೆ ಮತ್ತು ಗುಪ್ತಚರ ಸಂಸ್ಥೆಗಳ ಜಂಟಿ ತಂಡವು ವಿಚಾರಣೆ ನಡೆಸುತ್ತಿದೆ.