ಚೆನ್ನೈ: ಆಮೆ ವೇಗದಲ್ಲಿ ಸಾಗಿದ್ದ ಕೊಡನಾಡ್ ಹತ್ಯೆ ಪ್ರಕರಣದ ತನಿಖೆ ದಿಢೀರ್ ವೇಗ ಪಡೆದುಕೊಂಡಿದೆ. ಮೊದಲ ಬಾರಿಗೆ ಆರೋಪಿಗಳನ್ನು ಬಂಧಿಸಲಾಗಿದೆ.
ತಮಿಳುನಾಡಿನ ವಿಶೇಷ ತಂಡವು ಪ್ರಮುಖ ಆರೋಪಿ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಕಾರು ಚಾಲಕ ದಿವಂಗತ ಕನಕರಾಜ್ ಅವರ ಸಹೋದರ ಧನಪಾಲ್, ಆತನೊಂದಿಗೆ ಮತ್ತೋರ್ವ ಆರೋಪಿ ರಮೇಶ್ನನ್ನು ಬಂಧಿಸಲಾಗಿದೆ.
ಇಬ್ಬರನ್ನು ಗುಡಲೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನವೆಂಬರ್ 8 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಐಪಿಸಿ ಸೆಕ್ಷನ್ 201, 204, ಮತ್ತು 120 (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಏನಿದು ಘಟನೆ?
ಏಪ್ರಿಲ್ 2017 ರಲ್ಲಿ ನೀಲಗಿರಿ ಜಿಲ್ಲೆಯ ಕೊಡನಾಡ್ ಎಸ್ಟೇಟ್‌ನಲ್ಲಿ ಕೈಗಡಿಯಾರಗಳು ಮತ್ತು ಸ್ಫಟಿಕಮ ಘೇಂಡಾಮೃಗದ ಪ್ರತಿಮೆಯಂತಹ ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಲಾಗಿತ್ತು. ಆ ವೇಳೆ, ಸೆಕ್ಯೂರಿಟಿ ಗಾರ್ಡ್ ಓಂ ಬಹದ್ದೂರ್ ಅವರನ್ನು ಕೊಲ್ಲಲಾಗಿತ್ತು.
ಇದನ್ನೂ ಓದಿ: ಶಶಿಕಲಾ ಸ್ವ ಪಕ್ಷಕ್ಕೆ ಮರಳುವ ಬಗ್ಗೆ ಪಕ್ಷ ನಿರ್ಧರಿಸುತ್ತದೆ: ಎಐಎಡಿಎಂಕೆ ನಾಯಕ ಓ ಪನ್ನೀರ್ ಸೆಲ್ವಂ
ಕಳ್ಳತನದ ವೇಳೆ ಮತ್ತೋರ್ವ ಸೆಕ್ಯೂರಿಟಿ ಗಾರ್ಡ್ ಕಿಶನ್ ಬಹದ್ದೂರ್ ತೀವ್ರವಾಗಿ ಗಾಯಗೊಂಡಿದ್ದು, ಓಂ ಬಹದ್ದೂರ್ ಸಾವನ್ನಪ್ಪಿದ್ದ. ತನಿಖೆಯಲ್ಲಿ ಹನ್ನೊಂದು ಮಂದಿ ಆರೋಪಿಗಳು ಎಂದು ಕಂಡು ಹಿಡಿಯಲಾಗಿತ್ತು. ವರದಿಗಳ ಪ್ರಕಾರ ಸ್ಥಳಕ್ಕೆ ಬರುವ ಮುನ್ನವೇ ಸಾಕ್ಷ್ಯಗಳನ್ನು ತಿರುಚಲಾಗಿದೆ ಎಂದು ವಿಧಿವಿಜ್ಞಾನ ತಜ್ಞರು ಹೇಳಿದ್ದರು.
ದರೋಡೆ ಮತ್ತು ಕೊಲೆ ಪ್ರಕರಣದ ಪ್ರಮುಖ ಶಂಕಿತ ಕನಕರಾಜ್ 2017 ರ ಏಪ್ರಿಲ್‌ನಲ್ಲಿ ಸೇಲಂ - ಉಳುಂದೂರುಪೇಟೆ ಹೆದ್ದಾರಿಯ ಅತ್ತೂರಿನಲ್ಲಿ ಕಾರು ಅಪಘಾತದಲ್ಲಿ ಸಾವಿಗೀಡಾಗಿದ್ದರು. ಇದೇ ವೇಳೆ, ಮತ್ತೋರ್ವ ಶಂಕಿತ ಸಯಾನ್ ಕೂಡ ಕೇರಳದ ಪಾಲಕ್ಕಾಡ್‌ನಲ್ಲಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದ. ಆ ವೇಳೆ, ಆತನ ಪತ್ನಿ ಮತ್ತು ಮಗಳು ಮೃತಪಟ್ಟಿದ್ದರು. ಹೀಗಾಗಿ ಕನಕರಾಜ್ ಸಾವು ಕೊಲೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದು, ಸಂಬಂಧಿಕರು ದೂರು ದಾಖಲಿಸಿದ್ದರು.
ಕನಕರಾಜ್ ಕುಡಿದ ಅಮಲಿನಲ್ಲಿದ್ದ ಎಂದು ತನಿಖಾಧಿಕಾರಿಗಳು ಮರಣೋತ್ತರ ಪರೀಕ್ಷೆಯ ವರದಿಯನ್ನು ಆಧರಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿದ್ದರು. ರಸ್ತೆ ಅಪಘಾತ ಪ್ರಕರಣವನ್ನು ಸೇಲಂ ಗ್ರಾಮಾಂತರ ಪೊಲೀಸರು ಐದು ದಿನಗಳ ಹಿಂದೆ ಪುನಃ ತೆರೆದು ಈಗ ಸಂಬಂಧಿಸಿದ ಇಬ್ಬರನ್ನು ಬಂಧಿಸಿದ್ದಾರೆ.