ಫಿರೋಜಾಬಾದ್ (ಉತ್ತರ ಪ್ರದೇಶ): ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಯಡಿ ಕಾರ್ಯಕ್ರಮದಲ್ಲಿ ಅಣ್ಣ ತನ್ನ ತಂಗಿಯನ್ನೇ ಮದುವೆಯಾಗಿರುವ ವಿಲಕ್ಷಣ ಘಟನೆಯೊಂದು ಉತ್ತರ ಪ್ರದೇಶದ ಫಿರೋಜಾಬಾದ್ನ ತುಂಡ್ಲಾ ಪಟ್ಟಣದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ತುಂಡಲ್ನ ಬ್ಲಾಕ್ ಅಭಿವೃದ್ಧಿ ಕಚೇರಿ ಆವರಣದಲ್ಲಿ ಮುಖ್ಯಮಂತ್ರಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ತುಂಡಲಾ ಪುರಸಭೆ, ತುಂಡ್ಲಾ ಬ್ಲಾಕ್ ಮತ್ತು ನಾರ್ಖಿ ಬ್ಲಾಕ್‌ನ 51 ಜೋಡಿಗಳು ವಿವಾಹವಾಗಿದ್ದರು. ಸಮಾರಂಭದಲ್ಲಿ ಎಲ್ಲ ದಂಪತಿಗೆ ಗೃಹೋಪಯೋಗಿ ವಸ್ತುಗಳು ಮತ್ತು ಬಟ್ಟೆ ಇತ್ಯಾದಿಗಳನ್ನು ಉಡುಗೊರೆಯಾಗಿ ನೀಡಲಾಗಿತ್ತು.
ಫೋಟೋ ಬಿಚ್ಚಿಟ್ಟ ಸತ್ಯ
ವಿವಾಹವಾದ 51 ಜೋಡಿಗಳ ಪೈಕಿ ಒಂದು ಜೋಡಿಯ ಫೋಟೋ ವೈರಲ್ ಆಗುತ್ತಿತ್ತು. ಅವರು ಅಣ್ಣ - ತಂಗಿ ಎಂಬುದಾಗಿ ಬಲ್ಲವರು ಮಾತನಾಡಿಕೊಳ್ಳುತ್ತಿದ್ದು, ಇದು ಪೊಲೀಸರ ಗಮನಕ್ಕೂ ಬಂದಿತು. ತಕ್ಷಣ ಎಚ್ಚೆತ್ತ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಇವರ ಜೊತೆ ಅಂದು ವಿವಾಹವಾದ ಎಲ್ಲಾ ದಂಪತಿಯ ಪೂರ್ವಪರ ತನಿಖೆಗೂ ಪೊಲೀಸ್ ಇಲಾಖೆ ಮುಂದಾಗಿದೆ.
ತಂಗಿಯನ್ನೇ ಮದುವೆಯಾಗಿದ್ದೇಕೆ..?
ಸಾಮೂಹಿಕ ವಿವಾಹದಲ್ಲಿ ತಂಗಿಯನ್ನೇ ವರಿಸಿದ ವಿಷಯ ಅಧಿಕಾರಿಗಳೇ ಬೆಚ್ಚಿಬೀಳುವಂತೆ ಮಾಡಿತ್ತು. ಆದರೆ, ವಿವಾಹ ಸಮಾರಂಭದಲ್ಲಿ ನೀಡಲಾಗುವ ಕೊಡುಗೆ ಹಾಗೂ ಬಹುಮಾನ ಸೇರಿದಂತೆ ಗೃಹಪಯೋಗಿ ವಸ್ತುಗಳ ಪಡೆಯಲು ಈ ರೀತಿ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ಇದೀಗ ಈ ವಿವಾಹಕ್ಕಾಗಿ ದಂಪತಿಯ ಪಟ್ಟಿ ಹಾಗೂ ಅವರ ಪೂರ್ವಪರ ಪರಿಶೀಲಿಸಿದ ಅಧಿಕಾರಿಗಳಿಗೂ ಈ ಘಟನೆ ಕುರಿತು ಉತ್ತರಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಲಿವ್ - ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಅಪ್ರಾಪ್ತ ಜೋಡಿಗೆ ಭದ್ರತೆ ನಿರಾಕರಿಸಿದ ಹೈಕೋರ್ಟ್