ಬಾರಾಬಂಕಿ, ಉತ್ತರಪ್ರದೇಶ: ಜಿಲ್ಲೆಯ ಫತೇಪುರ್ ಪ್ರದೇಶದಲ್ಲಿ ಬೆಚ್ಚಿಬೀಳಿಸುವ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಹೋದರನೊಬ್ಬ ತನ್ನ ಸ್ವಂತ ತಂಗಿಯ ಶಿರಚ್ಛೇದನ ಮಾಡಿದ ಪ್ರಕರಣ ಮುನ್ನೆಲೆಗೆ ಬಂದಿದೆ. ಅಷ್ಟೇ ಅಲ್ಲ ಕೊಲೆ ಬಳಿಕ ತನ್ನ ಸಹೋದರಿಯ ತಲೆ ಕಡಿದು ಕೈಯಲ್ಲಿ ಹಿಡಿದುಕೊಂಡು ಠಾಣೆಗೆ ತೆರಳುತ್ತಿದ್ದ ಪ್ರಸಂಗವೂ ಕಂಡು ಬಂದಿತ್ತು. ಈ ಕೊಲೆಯ ವಿವರ ಇಲ್ಲಿದೆ ನೋಡಿ..
ತಂಗಿಯ ಶಿರಚ್ಛೇದ ಮಾಡಿದ ಅಣ್ಣ: ಫತೇಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಮಿಥ್ವಾರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಹೆಚ್ಚುವರಿ ಎಸ್ಪಿ ಅಶುತೋಷ್ ಮಿಶ್ರಾ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಶುಕ್ರವಾರ ಗ್ರಾಮದ ನಿವಾಸಿ ರಿಯಾಜ್ ಹಾಗೂ ಆತನ ಸ್ವಂತ ಸಹೋದರಿ ಆಸಿಫಾ ನಡುವೆ ಜಗಳ ನಡೆದಿದೆ. ಇದಾದ ನಂತರ ರಿಯಾಜ್ ಮನೆಯಿಂದ ಹೊರಟು ಹೋಗಿದ್ದ. ಸ್ವಲ್ಪ ಸಮಯದ ನಂತರ ವಾಪಸ್ ಬಂದ ರಿಯಾಜ್ ತನ್ನ ಸಹೋದರಿ ಆಸಿಫಾಗೆ ಬಟ್ಟೆ ಒಗೆಯುವಂತೆ ಹೇಳಿದ್ದಾನೆ. ಅಣ್ಣನ ಮಾತಿನ ಪ್ರಕಾರ ಆಸಿಫಾ ಬಟ್ಟೆ ಒಗೆಯಲು ನೀರು ತುಂಬಿಸುತ್ತಿದ್ದಳು. ಅಷ್ಟರಲ್ಲಿ ರಿಯಾಜ್ ಆಸಿಫಾಳ ಕತ್ತಿಗೆ ಮಚ್ಚು ಬೀಸಿದ್ದಾನೆ. ಬಳಿಕ ತಲೆ ತುಂಡರಿಸಿ ಕೊಲೆ ಮಾಡಿದ್ದಾನೆ. ಇದಾದ ಬಳಿಕ ತುಂಡರಿಸಿದ ತಲೆಯೊಂದಿಗೆ ಠಾಣೆಗೆ ತೆರಳಿದ್ದಾನೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ದೃಶ್ಯ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು: ಆರೋಪಿ ರಿಯಾಜ್ನ ಒಂದು ಕೈಯಲ್ಲಿ ಮಚ್ಚು, ಇನ್ನೊಂದು ಕೈಯಲ್ಲಿ ಸಹೋದರಿಯ ತಲೆ ಇತ್ತು. ದಾರಿಯಲ್ಲಿ ಈ ದೃಶ್ಯವನ್ನು ನೋಡಿದ ಗ್ರಾಮಸ್ಥರು ಬೆಚ್ಚಿಬಿದ್ದರು. ಬಳಿಕ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸುದ್ದಿ ತಿಳಿದಾಕ್ಷಣ ಫತೇಪುರ್ ಠಾಣೆ ಪೊಲೀಸರು ಸ್ಥಳಕ್ಕೆ ತಲುಪಲು ದೌಡಾಯಿಸಿದ್ದರು. ದಾರಿ ಮಧ್ಯೆಯೇ ಸಿಕ್ಕ ರಿಯಾಜ್ನನ್ನು ಪೊಲೀಸರು ಬಂಧಿಸಿದರು. ಇನ್ನು ಆತನ ಕೈಯಲ್ಲಿದ್ದ ಸಹೋದರಿಯ ತಲೆ ಮತ್ತು ಆಯುಧವನ್ನು ಪೊಲೀಸರು ವಶಪಡಿಸಿಕೊಂಡರು.
ತಂಗಿಯ ಕೊಲೆಯಾದ ನಂತರ ರಿಯಾಜ್ ಮುಖದಲ್ಲಿ ಸ್ವಲ್ಪವೂ ಪಶ್ಚಾತಾಪ ಕಾಣಿಸಲಿಲ್ಲ. ನೆರೆಹೊರೆಯವರ ಪ್ರಕಾರ, ರಿಯಾಜ್ ತನ್ನ ಯೋಜನೆ ಪ್ರಕಾರ ಕೊಲೆ ನಡೆಸಿದ್ದಾನೆ ಎನ್ನಲಾಗ್ತಿದೆ. ಅವರ ಮನೆಯಲ್ಲಿ ತಂದೆ - ತಾಯಿಯಲ್ಲದೇ ಇತರ ಒಡಹುಟ್ಟಿದವರು ಇದ್ದಾರೆ. ಹೀಗಿರುವಾಗ ಮನೆಯೊಳಗೆ ಕೊಲೆ ಮಾಡುವುದು ಕಷ್ಟ ಎಂದು ಬಟ್ಟೆ ಒಗೆಯಲು ಆಸಿಫಾಳನ್ನು ಮನೆಯ ಹೊರಗೆ ಕಳುಹಿಸಿದ್ದಾನೆ. ಆತ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಹಲ್ಲೆ ಪ್ರಕರಣವೊಂದರಲ್ಲಿ ರಿಯಾಜ್ ಜೈಲು ಸೇರಿದ್ದ. 15 ದಿನಗಳ ಹಿಂದಷ್ಟೇ ಹೊರಗೆ ಬಂದಿದ್ದನು ಎಂದು ಸ್ಥಳೀಯರು ಹೇಳಿದ್ದಾರೆ.
ಕೊಲೆಯ ಹಿಂದಿನ ಕಾರಣವೇನು?: ರಿಯಾಜ್ ಸಹೋದರಿ ಆಸಿಫಾ ಮೇ 25 ರಂದು ಜಮೀನಿನ ಕಡೆಗೆ ಹೋಗಿದ್ದಳು. ಈ ವೇಳೆ ಗ್ರಾಮದ ಯುವಕ ಚಾಂದ್ ಬಾಬು ಅವರ ಪುತ್ರ ಜಾನ್ ಮೊಹಮ್ಮದ್ ಜೊತೆ ಓಡಿ ಹೋಗಿದ್ದಳು. ಹಲವು ದಿನಗಳಿಂದ ಆಸಿಫಾ ಪತ್ತೆಯಾಗದಿದ್ದಾಗ ಹುಡುಗನ ತಂದೆ ಚಾಂದ್ ಬಾಬು ಸೇರಿದಂತೆ ಐವರ ವಿರುದ್ಧ ಮೇ 29ರಂದು ಫತೇಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರು ಆಸಿಫಾಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದರು. ಬಳಿಕ ಚಾಂದ್ ಬಾಬುವನ್ನು ಜೈಲಿಗೆ ಕಳುಹಿಸಿದ್ದರು. ಸದ್ಯ ಚಾಂದ್ ಬಾಬು ಜೈಲಿನಲ್ಲಿದ್ದಾನೆ. ಆಸಿಫಾಳ ಈ ಕೃತ್ಯದಿಂದ ರಿಯಾಜ್ ಕೋಪಗೊಂಡಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ತಂಗಿಯ ಈ ಕೃತ್ಯದಿಂದ ತನಗೆ ಅವಮಾನವಾಗಿದೆ ಎಂದು ರಿಯಾಜ್ ಭಾವಿಸಿದ್ದಾನೆ. ಇದರಿಂದಾಗಿ ಅವನು ತನ್ನ ಸಹೋದರಿಯನ್ನು ಕೊಂದು ಪೊಲೀಸ್ ಠಾಣೆಗೆ ತೆರಳುತ್ತಿದ್ದ. ಈ ಘಟನೆ ಕುರಿತು ಫತೇಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಅನುಸರಿಸಿದ್ದಾರೆ.
ಓದಿ: ಪತಿಯನ್ನು ಪ್ರಿಯಕರನಿಂದ ಕೊಲ್ಲಿಸಿ ಮಿಸ್ಸಿಂಗ್ ಕೇಸು ದಾಖಲಿಸಿದ ಪತ್ನಿ, ಇಬ್ಬರ ಬಂಧನ