ಗಾಂಧಿನಗರ (ಗುಜರಾತ್): ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 1 ರಂದು ಗುಜರಾತ್‌ನ ಮೋರ್ಬಿಗೆ ಭೇಟಿ ನೀಡಲಿದ್ದಾರೆ ಎಂದು ಗುಜರಾತ್‌ನ ಮುಖ್ಯಮಂತ್ರಿ ಕಚೇರಿ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಸಾವಿನ ಸಂಖ್ಯೆ 132ಕ್ಕೆ ಏರಿಕೆ: ಮೋರ್ಬಿ ಪಟ್ಟಣದ ತೂಗು ಸೇತುವೆಯೊಂದು ಭಾನುವಾರ ಕುಸಿದು ಬಿದ್ದಿದ್ದು, ದುರಂತದಲ್ಲಿ ಮಹಿಳೆಯರು, ಮಕ್ಕಳು ಸೇರಿ ಈವರೆಗೆ ಸುಮಾರು 132 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ, 100ಕ್ಕೂ ಹೆಚ್ಚು ಜನರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಕೇಂದ್ರವೂ ರಾಜ್ಯ ಸರ್ಕಾರಕ್ಕೆ ಎಲ್ಲಾ ರೀತಿಯ ಸಹಾಯವನ್ನು ನೀಡುತ್ತಿದೆ. ರಾಜ್ಯ ಸರ್ಕಾರ ಘಟನೆಯ ತನಿಖೆಗಾಗಿ ವಿಶೇಷ ಸಮಿತಿ ರಚಿಸಿದೆ ಎಂದು ಪ್ರಧಾನಿ ಮೋದಿ ಈಗಾಗಲೇ ತಿಳಿಸಿದ್ದಾರೆ.
ದುರಂತಕ್ಕೆ ಕಾರಣವೇನು?: ಸೇತುವೆ ನವೀಕರಣದ ಬಳಿಕ ಅದರ ಗುಣಮಟ್ಟವನ್ನು ಪರಿಶೀಲನೆ ಮಾಡಿಲ್ಲ ಎನ್ನಲಾಗಿದೆ. ಮಾಹಿತಿಯ ಪ್ರಕಾರ, ದುರಂತ ಸಂಭವಿಸಿದ ಸೇತುವೆಯ ಮೇಲೆ 150 ಜನರು ಒಟ್ಟಿಗೆ ಓಡಾಡಬಹುದು ಅಥವಾ ನಿಲ್ಲಬಹುದು. ಆದ್ರೆ, ಪೂಜೆ ಎಂದು ಸಾಮರ್ಥ್ಯಕ್ಕಿಂತ ಮೂರು ಪಟ್ಟು ಅಂದ್ರೆ ಸುಮಾರು 500 ಜನರು ನಿಂತಿದ್ದೇ ಕುಸಿದು ಬೀಳಲು ಪ್ರಮುಖ ಕಾರಣ ಎನ್ನಲಾಗಿದೆ.
ಸಂತಾಪ ಸೂಚಿಸಿದ ಜಾಗತಿಕ ನಾಯಕರು: ಗುಜರಾತ್ನಲ್ಲಿ ನಡೆದ ದುರಂತಕ್ಕೆ ಜಾಗತಿಕ ನಾಯಕರು ಸಂತಾಪ ಸೂಚಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮರ್ ಪುಟಿನ್ ಮತ್ತು ನೇಪಾಳದ ಪ್ರಧಾನಿ ಶೇರ್ ಬಹದೂರ್ ದೇವುಬಾ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪುಟಿನ್, ಗುಜರಾತ್ನಲ್ಲಿ ಸಂಭವಿಸಿದ ದುರಂತದ ಬಗ್ಗೆ ನನ್ನ ಸಂತಾಪವನ್ನು ಸ್ವೀಕರಿಸಿ. ಘಟನೆಯಲ್ಲಿ ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದೇವೆ. ನಮ್ಮ ಪ್ರಾರ್ಥನೆಗಳು ದುಃಖಿತ ಕುಟುಂಬಗಳೊಂದಿಗಿವೆ ಎಂದು ಹೇಳಿದ್ದಾರೆ.
ನೇಪಾಳದ ಪ್ರಧಾನಿ ದೇವುಬಾ, ಸೇತುವೆ ಕುಸಿದು ಬಿದ್ದ ದುರಂತದಿಂದ ಅತೀವ ದುಃಖವಾಗಿದೆ. ಅಮೂಲ್ಯ ಜೀವಗಳ ನಷ್ಟದ ಬಗ್ಗೆ ನಾವು ಭಾರತ ಸರ್ಕಾರ ಮತ್ತು ಜನರಿಗೆ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ನಮ್ಮ ಪ್ರಾರ್ಥನೆಗಳು ದುಃಖಿತ ಕುಟುಂಬಗಳೊಂದಿಗಿವೆ ಎಂದು ಟ್ವೀಟ್ ಮಾಡಿದ್ದಾರೆ.
ಸೌದಿ ಅರೇಬಿಯಾದ ವಿದೇಶಾಂಗ ಸಚಿವ ಗುಜರಾತ್ ಪ್ರತಿಕ್ರಿಯಿಸಿ,'ಸೌದಿ ಅರೇಬಿಯಾವು ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತದೆ. ಘಟನೆಯಲ್ಲಿ ಗಾಯಗೊಂಡವರು ಬೇಗ ಗುಣಮುಖರಾಗುವಂತೆ ಆಶಿಸುತ್ತೇವೆ ಎಂದು ಹೇಳಿದ್ದಾರೆ.
ಅಮೇರಿಕ ರಾಯಭಾರಿ ಕಚೇರಿಯು ಸಂತಾಪ ವ್ಯಕ್ತಪಡಿಸಿ, ದುರಂತದಿಂದ ಅಪಾರ ದುಃಖವಾಗಿದೆ. ಈ ಬಗ್ಗೆ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸುವುದಾಗಿ ಹೇಳಿದೆ.
ಪೋಲೆಂಡ್ನ ವಿದೇಶಾಂಗ ಸಚಿವ ಜಿಬಿಗ್ನ್ಯೂ ರೌ ಸಂತಾಪ ಸೂಚಿಸಿ, ಗುಜರಾತ್‌ನ ಜನತೆಯೊಂದಿಗೆ ನಾವಿದ್ದೇವೆ ಎಂದು ಹೇಳಿದ್ದಾರೆ. ಸಿಂಗಾಪುರ ಕಮಿಷನರ್ ಸಿಮನ್ ವೋಂಗ್ ತೂಗು ಸೇತುವೆ ದುರಂತಕ್ಕೆ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಗುಜರಾತ್ ಸೇತುವೆ ದುರಂತ: ಮಡಿದವರ ಸಂಖ್ಯೆ 100ಕ್ಕೆ ಏರಿಕೆ: ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ..ಪಿಎಂ ರೋಡ್ ಶೋ ರದ್ದು