ಅಹಮದಾಬಾದ್(ಗುಜರಾತ್): 135 ಜನರ ಬಲಿ ಪಡೆದಿದ್ದ ಮೊರ್ಬಿ ಸೇತುವೆ ದುರಂತಕ್ಕೆ ಶಿಕ್ಷೆಯಾಗಿ ಪುರಸಭೆಯನ್ನು ವಿಸರ್ಜಿಸಲಾಗುವುದು. ಮೃತರಿಗೆ ನೀಡಲಾದ ಪರಿಹಾರವನ್ನೂ ಹೆಚ್ಚಿಸಿ 6 ಲಕ್ಷದ ಬದಲಾಗಿ 10 ಲಕ್ಷ ರೂಪಾಯಿ ನೀಡುವುದಾಗಿ ಗುಜರಾತ್ ಸರ್ಕಾರ ಹೈಕೋರ್ಟ್ಗೆ ಸೋಮವಾರ ತಿಳಿಸಿದೆ.
ಮೊರ್ಬಿಯಲ್ಲಿನ ಐತಿಹಾಸಿಕ ತೂಗು ಸೇತುವೆಯನ್ನು ನವೀಕರಿಸಿ, ಅಕ್ಟೋಬರ್ 30 ರಂದು ಪ್ರವಾಸಿಗರಿಗೆ ಮುಕ್ತ ಮಾಡಲಾಗಿತ್ತು. ಒಂದೇ ಬಾರಿಗೆ ನಿಗದಿಗಿಂತಲೂ ಅಧಿಕ ಜನರು ಸೇತುವೆ ಮೇಲೆ ಬಂದ ಕಾರಣ ಅದು ಭಾರ ತಡೆಯದೇ ಕುಸಿದು ಬಿದ್ದಿತ್ತು. ಘಟನೆಯಲ್ಲಿ ಮಹಿಳೆಯರು, ಮಕ್ಕಳು ಸೇರಿ 135 ಜನರು ಅಕಾಲಿಕ ಮರಣ ಹೊಂದಿದ್ದರು. ಹಲವರು ಗಾಯಗೊಂಡಿದ್ದರು.
ತೂಗು ಸೇತುವೆಯನ್ನು ನವೀಕರಣ ಮಾಡಿದ ಒರೆವಾ ಕಂಪನಿಯ ನಾಲ್ವರು ಸಿಬ್ಬಂದಿ, ಟಿಕೆಟ್ ವಿತರಕ ಮತ್ತು ಅಲ್ಲಿನ ಭದ್ರತಾ ಸಿಬ್ಬಂದಿಯನ್ನು ಬಂಧಿಸಲಾಗಿದೆ. ದುರಂತದ ಬಗ್ಗೆ ಹೈಕೋರ್ಟ್ಗೆ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ಪ್ರಕರಣದಲ್ಲಿ ತೆಗೆದುಕೊಂಡು ಕ್ರಮಗಳ ಬಗ್ಗೆ ತಿಳಿಸಲು ಸೂಚಿಸಿತ್ತು.
ಇದೀಗ ಮಾಹಿತಿ ನೀಡಿರುವ ಸರ್ಕಾರ, ಸೇತುವೆಯ ಸಾಮರ್ಥ್ಯವನ್ನು ಪರೀಕ್ಷಿಸದೇ ಜನರ ಬಳಕೆಗೆ ಬಿಟ್ಟ ಕಾರಣ ವ್ಯಾಪ್ತಿಗೆ ಬರುವ ಪುರಸಭೆಯನ್ನು ಸಂಪೂರ್ಣವಾಗಿ ಬರ್ಖಾಸ್ತು ಮಾಡಲಾಗಿದೆ. ಸಂತ್ರಸ್ತರಿಗೆ 4 ಲಕ್ಷ ರೂಪಾಯಿ ಹೆಚ್ಚುವರಿ ಪರಿಹಾರ ಘೋಷಿಸಲಾಗಿದೆ. ಗಾಯಾಳುಗಳಿಗೂ ಹೆಚ್ಚಿನ ನೆರವು ನೀಡಲಾಗಿದೆ ಎಂದು ತಿಳಿಸಲಾಗಿದೆ.
ಓದಿ: ಅಸ್ಸೋಂ ಪೊಲೀಸರ 172ನೇ ಎನ್‌ಕೌಂಟರ್: ಬಿಹಾರ ಮೂಲದ ಸುಪಾರಿ ಕಿಲ್ಲರ್ ಮಟ್ಯಾಷ್