ದರ್ಭಾಂಗ್(ಬಿಹಾರ): ಗುಜರಾತ್ನ ಮೊರ್ಬಿ ಸೇತುವೆ ಕುಸಿದು 141 ಜನರು ಸಾವನ್ನಪ್ಪಿದ ದುರ್ಘಟನೆ ಕಳೆದ ವರ್ಷ ನಡೆದಿತ್ತು. ಬಳಿಕ ಎಲ್ಲ ಸೇತುವೆಗಳ ಗುಣಮಟ್ಟದ ಪರಿಶೀಲನೆಗೆ ಕೇಂದ್ರ ಸರ್ಕಾರ ಸೂಚಿಸಿತ್ತು. ಇದೀಗ ಬಿಹಾರದ ದರ್ಭಾಂಗ್ನಲ್ಲಿ ಕಮಲಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕಬ್ಬಿಣದ ಸೇತುವೆಯ ಮೇಲೆ ಟ್ರಕ್ ಸಂಚರಿಸುತ್ತಿದ್ದಾಗ ತುಂಡಾಗಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.
ದರ್ಭಾಂಗ್ ಜಿಲ್ಲೆಯ ಕುಶೇಶ್ವರಸ್ಥಾನದ ಕಮಲಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕಬ್ಬಿಣದ ಸೇತುವೆಯ ಮೇಲೆ ಇಂದು ಮರಳು ಸಾಗಿಸುತ್ತಿದ್ದ ಟ್ರಕ್ ಸಾಗುತ್ತಿದ್ದಾಗ ಏಕಾಏಕಿ ತುಂಡಾಗಿದೆ. ಇದರಿಂದ ಟ್ರಕ್ ಕೆಳಮುಖವಾಗಿ ಗಾಳಿಯಲ್ಲಿ ನೇತಾಡುತ್ತಿದೆ. ಈ ಸೇತುವೆಯ ವಿಭಜನೆಯಿಂದಾಗಿ ಮಧುಬನಿ, ಸಹರ್ಸಾ, ಖಗರಿಯಾ ಮತ್ತು ಸಮಷ್ಟಿಪುರ ಸೇರಿದಂತೆ 10 ಹಳ್ಳಿಗಳ ಸಂಚಾರ ಬಂದ್ ಆಗಿದೆ.
ಘಟನೆಯ ವಿವರ: ತುಂಬಾ ಹಳೆಯದಾದ ಈ ಸೇತುವೆ ದುರಸ್ತಿಗೆ ಬಂದಿದ್ದು, ದೊಡ್ಡ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಇದರ ದುರಸ್ತಿ ಅಥವಾ ಇದಕ್ಕೆ ಸಮಾನಾಂತರವಾಗಿ ಇನ್ನೊಂದು ಸೇತುವೆ ನಿರ್ಮಾಣಕ್ಕೆ ಇಲ್ಲಿನ ಜನರು ಒತ್ತಾಯಿಸಿದ್ದರು. ಇಂದು ಮರಳು ತುಂಬಿದ್ದ ಟ್ರಕ್ ಮಧ್ಯಭಾಗದಲ್ಲಿ ಹಾದು ಹೋಗುತ್ತಿದ್ದಾಗ, ಶಿಥಿಲಗೊಂಡಿದ್ದ ಸೇತುವೆ ಭಾರ ತಾಳದೇ ಎರಡು ತುಂಡಾಗಿದೆ. ಅದೃಷ್ಟವಶಾತ್ ಟ್ರಕ್ ಚಾಲಕ ಪ್ರಾಣಾಯದಿಂದ ಪಾರಾಗಿದ್ದಾನೆ.
ಗುತ್ತಿಗೆದಾರರ ವಿರುದ್ಧ ಜನಾಕ್ರೋಶ: ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಗ್ರಾಮಸ್ಥರ ನೆರವಿನಿಂದ ಲಾರಿಯನ್ನು ಹೊರ ತೆಗೆಯುವ ಪ್ರಯತ್ನ ನಡೆಸಲಾಗಿದೆ. ಈ ಸೇತುವೆಯು 10 ಹಳ್ಳಿಗಳಿಗೆ ಸಂಪರ್ಕ ನೀಡುತ್ತದೆ. ಇದರ ಕುಸಿತದಿಂದ ಸಂಪರ್ಕ ಕಡಿದುಕೊಂಡಂತಾಗಿದೆ. ಸೇತುವೆ ಶಿಥಿಲಗೊಂಡಿದ್ದು, ಇದರ ನವೀಕರಣ ಮತ್ತು ಹೊಸ ಸೇತುವೆ ನಿರ್ಮಾಣಕ್ಕೆ ಟೆಂಡರ್ ನೀಡಲಾಗಿದೆ. ಆದರೂ ಗುತ್ತಿಗೆದಾರರು ಇದನ್ನು ದುರಸ್ತಿ ಮಾಡಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ಈ ಬಗ್ಗೆ ಆದೇಶಿಸಿದ್ದರೂ ಕಾಮಗಾರಿ ನಡೆದಿಲ್ಲ. ಹೀಗಾಗಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಆಗ್ರಹವಾಗಿದೆ.
2021ರಲ್ಲಿ ಶಂಕುಸ್ಥಾಪನೆ, ಆದರೂ ನಡೆದಿಲ್ಲ ಕೆಲಸ: ಕುಸಿದು ಬಿದ್ದಿರುವ ಸೇತುವೆಗೆ ಸಮಾನಾಂತರವಾಗಿ ಹೊಸ ಸೇತುವೆ ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 2021 ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. ಅಲ್ಲದೇ, ಹಳೆಯ ಸೇತುವೆಯ ದುರಸ್ತಿ ಕಾರ್ಯ ನಡೆಸಲಾಗುವುದು ಎಂದು ಘೋಷಿಸಿದ್ದರು. ಆದರೆ, ಹೊಸ ಸೇತುವೆ ನಿರ್ಮಾಣ ಕಾಮಗಾರಿ ಅಥವಾ ಹಳೆಯ ಸೇತುವೆ ದುರಸ್ತಿ ಕಾರ್ಯವಾಗಲಿ ನಡೆಸಲಾಗಿಲ್ಲ. ಇದರಿಂದಾಗಿ ತೀವ್ರ ಶಿಥಿಲಗೊಂಡಿದ್ದ ಸೇತುವೆ ಕುಸಿದಿದೆ.
ಮೊರ್ಬಿ ಸೇತುವೆ ದುರಂತದ ಹಿನ್ನೋಟ: ಗುಜರಾತ್ನ ಮೊರ್ಬಿಯಲ್ಲಿ 150 ವರ್ಷಗಳ ಹಳೆಯದಾದ, ಮೊರ್ಬಿ ರಾಜವಂಶದ ಆಡಳಿತದ ಸರ್ ವಘಾಜಿ ಠಾಕೋರ್ ನಿರ್ಮಿಸಿದ್ದ 233 ಮೀಟರ್, 4.6 ಅಡಿ ಅಗಲದ ತೂಗು ಸೇತುವೆ ಕಳೆದ ವರ್ಷದ ಅಕ್ಟೋಬರ್ನಲ್ಲಿ ಕುಸಿದು 141 ಜನರು ಬಲಿಯಾಗಿದ್ದರು. ಈ ದುರ್ಘಟನೆ ದೇಶಾದ್ಯಂತ ತಲ್ಲಣ ಉಂಟು ಮಾಡಿತ್ತು. ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾದ ಕೇಬಲ್ ತೂಗು ಸೇತುವೆಯನ್ನು ನವೀಕರಿಸಿ ಜನರ ಓಡಾಟಕ್ಕೆ ಮುಕ್ತಗೊಳಿಸಲಾಗಿತ್ತು.
ಘಟನೆ ನಡೆದ ದಿನದಂದು ರಜೆಯ ಕಾರಣ ಜನರು ಹೆಚ್ಚಿನ ಪ್ರಮಾಣದಲ್ಲಿ ಸೇತುವೆ ವೀಕ್ಷಿಸಲು ಬಂದಿದ್ದರು. ಎರಡು ದಿನಗಳ ಹಿಂದಷ್ಟೇ ಐತಿಹಾಸಿಕ ತೂಗು ಸೇತುವೆಯನ್ನು ದುರಸ್ತಿ ಮಾಡಲಾಗಿತ್ತು. ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದ ಜನರು ಸೇತುವೆ ನಿಂತಿದ್ದ ಕಾರಣ ಅದು ಕುಸಿದು ಬಿದ್ದು 141 ಜನರು ನದಿ ನೀರು ಪಾಲಾಗಿದ್ದರು. ಅಲ್ಲದೇ, 100 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ದುರ್ಘಟನೆಯ ಹಿನ್ನೆಲೆ ಮೋರ್ಬಿ ಸೇತುವೆ ನವೀಕರಿಸಿದ ಒರೆವಾ ಕಂಪನಿಯ ಅಧಿಕಾರಿಗಳು, ಸೇತುವೆ ಟಿಕೆಟ್ ಮಾರಾಟಗಾರರು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಒಂಬತ್ತು ಜನರನ್ನು ಬಂಧಿಸಲಾಗಿತ್ತು. ಸೇತುವೆ ಕುಸಿತ ದುರಂತ ತನಿಖೆಗಾಗಿ ಗುಜರಾತ್ ಸರ್ಕಾರ ಐವರು ಸದಸ್ಯರ ಸಮಿತಿಯನ್ನೂ ರಚಿಸಿತ್ತು.
ಓದಿ: ಬಿಹಾರ ಮದ್ಯ ದುರಂತ: ಮೃತರ ಸಂಖ್ಯೆ 71ಕ್ಕೆ ಏರಿಕೆ, ಮೊರ್ಬಿ ಸೇತುವೆ ಘಟನೆ ಉಲ್ಲೇಖಿಸಿದ ನಿತೀಶ್