ಇಟಾವಾ(ಉತ್ತರ ಪ್ರದೇಶ): ವಿವಾಹದ ಸಂದರ್ಭದಲ್ಲಿ ವಧು ಸಾವನ್ನಪ್ಪಿದ್ದು, ವರನಿಗೆ ವಧುವಿನ ಸಹೋದರಿಯ ಜೊತೆ ಕುಟುಂಬಸ್ಥರು ಮದುವೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಘಟನೆಯ ವಿವರ
ಭರ್ಥನಾ ಪೊಲೀಸ್ ಠಾಣಾ ವ್ಯಾಪ್ತಿಯ ಸಮಸ್ಪುರ ಗ್ರಾಮದ ಮಂಜೇಶ್ ಕುಮಾರ್ ಮದುವೆ ಸುರಭಿ ಎಂಬ ಯುವತಿಯ ಜೊತೆ ನಿಶ್ಚಯವಾಗಿತ್ತು. ಎರಡು ಕುಟುಂಬಸ್ಥರಿಂದ ಮದುವೆ ತಯಾರಿ ಜೋರಾಗಿಯೇ ನಡೆದಿತ್ತು. ಮದುವೆಪೂರ್ವ ಕಾರ್ಯಕ್ರಮಗಳು ಸಂಪೂರ್ಣಗೊಂಡಿದ್ದವು. ಮದುವೆ ದಿನ ತಾಳಿ ಕಟ್ಟುವ ಸಮಯದಲ್ಲಿ ವಧುವಿನ ಆರೋಗ್ಯದಲ್ಲಿ ಏರುಪೇರಾಗಿದ್ದು, ದಿಢೀರ್ ಕುಸಿದು ಬಿದ್ದಿದ್ದಾಳೆ. ಕೂಡಲೇ ಗ್ರಾಮಸ್ಥರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದು ವೈದ್ಯರು ಆಕೆ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ. ಸುರಭಿ ಹೃದಯಾಘಾತದಿಂದ ಸಾವನ್ನಪ್ಪಿರಬಹುದೆಂದು ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದಾರೆ.
ಈ ವೇಳೆ ಸಂತೋಷದಿಂದ ಕೂಡಿದ ಮದುವೆ ಮನೆಯಲ್ಲಿ ನೀರವ ಮೌನ ಆವರಿಸಿತು. ಮಗಳನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ಇಂತಹ ಸಂದರ್ಭದಲ್ಲಿ ಎರಡು ಕುಟುಂಬಸ್ಥರ ನಡುವೆ ಮತ್ತೆ ಮಾತುಕತೆಗಳು ನಡೆದವು. ಚರ್ಚೆ ಬಳಿಕ ಮೃತ ಸುರಭಿ ಕಿರಿಯ ಸಹೋದರಿ ನಿಶಾ ಜೊತೆ ಮದುವೆ ಮಾಡಿಕೊಳ್ಳಲು ವರ ಮತ್ತು ಆತನ ಕುಟುಂಬಸ್ಥರು ರಾಜಿಯಾದರು. ಸುರಭಿ ಮೃತದೇಹವನ್ನು ಮನೆಯಲ್ಲಿಟ್ಟು ಆಕೆಯ ತಂಗಿ ನಿಶಾ ಮದುವೆ ಮಾಡಿದರು. ಮದುವೆ ಕಾರ್ಯಕ್ರಮಗಳು ಮುಗಿದ ಬಳಿಕ ಸುರಭಿಯ ಮೃತದೇಹದ ಅಂತ್ಯಕ್ರಿಯೆ ನಡೆಯಿತು.