ತಿರುವನಂತಪುರಂ (ಕೇರಳ): ತಿರುವನಂತಪುರಂ, ತ್ರಿಶೂರ್‌ನಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಎದೆಹಾಲು ಬ್ಯಾಂಕ್ ಸ್ಥಾಪಿಸಲು ಕೇರಳ ಆರೋಗ್ಯ ಇಲಾಖೆ ತೀರ್ಮಾನಿಸಿದೆ. ಕೋಝಿಕ್ಕೋಡ್ ಎದೆಹಾಲು ಬ್ಯಾಂಕ್‌ನ ಯಶಸ್ವಿ ಕಾರ್ಯಾಚರಣೆಯ ಒಂದು ವರ್ಷದ ನಂತರ ಇಲಾಖೆ ಈ ಘೋಷಣೆ ಮಾಡಿದೆ.
ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶನಿವಾರ ಕೋಝಿಕ್ಕೋಡ್ ಎದೆಹಾಲು ಬ್ಯಾಂಕ್‌ಗೆ ಭೇಟಿ ನೀಡಿದರು. ಬಳಿಕ ಮಾತನಾಡಿದ ಸಚಿವೆ, ಈ ಬ್ಯಾಂಕ್ನಿಂದ ಅನೇಕ ತಾಯಂದಿರು ಮತ್ತು ಮಕ್ಕಳಿಗೆ ಸಹಾಯವಾಗಿದೆ. ಸ್ತನ್ಯಪಾನವನ್ನು ಉತ್ತೇಜಿಸುವುದು ಮತ್ತು ಮಕ್ಕಳು ಹಾಗೂ ತಾಯಂದಿರಿಗೆ ಎಲ್ಲ ರೀತಿಯ ಅಗತ್ಯ ಬೆಂಬಲ ನೀಡುವುದು ಇದರ ಉದ್ದೇಶ. ಕೋಝಿಕ್ಕೋಡ್ ಎದೆಹಾಲು ಬ್ಯಾಂಕ್ ಪ್ರಾರಂಭವಾದಾಗಿನಿಂದ ಇಲ್ಲಿಯತನಕ 1,397 ತಾಯಂದಿರು ಹಾಲು ನೀಡಿದ್ದು, 1,813 ಮಕ್ಕಳು ಸದುಪಯೋಗ ಪಡೆದಿದ್ದಾರೆ ಎಂದರು.
ಇದನ್ನೂ ಓದಿ: ವಿಶ್ವ ಸ್ತನ್ಯಪಾನ ಸಪ್ತಾಹ: ಹೇಗಿದೆ ವಾಣಿ ವಿಲಾಸ ಆಸ್ಪತ್ರೆಯ ರಾಜ್ಯದ ಮೊದಲ ಹ್ಯೂಮನ್ ಮಿಲ್ಕ್ ಬ್ಯಾಂಕ್ ?
ಈ ಬ್ಯಾಂಕ್ ಮೂಲಕ ಇಲ್ಲಿಯವರೆಗೆ 1,26,225 ಮಿ ಲೀ ಎದೆಹಾಲು ಸಂಗ್ರಹಿಸಲಾಗಿದೆ. 1,16,315 ಮಿ.ಲೀ ವಿತರಿಸಲಾಗಿದೆ ಎಂದು ಜಾರ್ಜ್ ಮಾಹಿತಿ ಹೇಳಿದರು. ಈ ಬ್ಯಾಂಕ್ ಎಲ್ಲಾ ಅತ್ಯಾಧುನಿಕ ಪರೀಕ್ಷೆಗಳನ್ನು ನಡೆಸಿದ ನಂತರವೇ ಅಗತ್ಯವಿರುವ ಶಿಶುಗಳಿಗೆ ಸಂಗ್ರಹಿಸಿದ ಹಾಲು ಒದಗಿಸುತ್ತದೆ. ಕೋಝಿಕ್ಕೋಡ್ ರೀತಿಯ ಬ್ಯಾಂಕ್ ಅನ್ನು ಇದೀಗ ತಿರುವನಂತಪುರಂ ಮತ್ತು ತ್ರಿಶೂರ್‌ನಲ್ಲಿ ಶೀಘ್ರದಲ್ಲೇ ತೆರೆಯಲಾಗುವುದು ಎಂದು ಸಚಿವೆ ಹೇಳಿದರು.