ಕಠ್ಮಂಡು: ನೇಪಾಳ-ಭಾರತ ಗಡಿಯಲ್ಲಿ ಮಹೋಟಾರಿ ಜಿಲ್ಲೆಯಲ್ಲಿ ನೇಪಾಳ ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ಎಂಟು ಭಾರತೀಯ ವ್ಯಾಪಾರಿಗಳು ಗಾಯಗೊಂಡಿದ್ದಾರೆ.
ನೇಪಾಳದ ಅಧಿಕೃತ ಪತ್ರಿಕೆ 'ರೈಸಿಂಗ್ ನೇಪಾಳ'ದ ವರದಿಯ ಪ್ರಕಾರ, ಭಾನುವಾರ ರಾತ್ರಿ ಭಾರತೀಯ ವ್ಯಾಪಾರಸ್ಥರು ತಾತ್ಕಾಲಿಕ ಹೊರಠಾಣೆ ಮತ್ತು ಮತಿಹಾನಿ ಮಹಾನಗರ ಪಾಲಿಕೆಯಲ್ಲಿ ಕೊರೊನಾ ವೈರಸ್ ಸೋಂಕಿನ ತನಿಖೆಗಾಗಿ ಸ್ಥಾಪಿಸಲಾದ ಸಹಾಯ ಕೇಂದ್ರವನ್ನು ನೆಲಸಮಗೊಳಿಸಿದ ವೇಳೆ ಈ ಘಟನೆ ಸಂಭವಿಸಿದೆ.
'ಮೈ ರಿಪಬ್ಲಿಕ್' ವೆಬ್‌ಸೈಟ್ ಪ್ರಕಾರ, ಘರ್ಷಣೆಯಲ್ಲಿ ಸಶಸ್ತ್ರ ಪೊಲೀಸ್ ಪಡೆಯ ಒಬ್ಬ ಸೈನಿಕ ಮತ್ತು ಎಂಟು ಭಾರತೀಯ ವ್ಯಾಪಾರಸ್ಥರು ಗಾಯಗೊಂಡಿದ್ದಾರೆ.
ಮತಿಹಾನಿ ಬಾರ್ಡರ್ ಚೆಕ್ ಪೋಸ್ಟ್‌ನ ಇನ್ಸ್‌ಪೆಕ್ಟರ್ ಬಲರಾಮ್ ಗೌತಮ್ ಮಾತನಾಡಿ, ಭಾನುವಾರ ರಾತ್ರಿ ಎಂಟು ಗಂಟೆಗೆ 50-60 ಭಾರತೀಯರು ಮದ್ಯ ಸೇವಿಸಿ ಗಡಿ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಿದರು.
ಭಾರತೀಯ ವ್ಯಾಪಾರಿ ಮಾತನಾಡಿ, ಇನ್ಸ್‌ಪೆಕ್ಟರ್ ಬಲರಾಮ್ ಗೌತಮ್ ಎಪಿಎಫ್ ಸಿಬ್ಬಂದಿಯನ್ನು ಕರೆಸಿ ಭಾರತದಿಂದ ಆಲೂಗಡ್ಡೆ, ಈರುಳ್ಳಿ ಮತ್ತು ಅಕ್ಕಿ ಆಮದು ಮಾಡಿಕೊಳ್ಳುವ ವ್ಯಾಪಾರಿಗಳನ್ನು ಹೊಡೆಸಿದ್ದಾರೆ. ವ್ಯಾಪಾರಿಗಳ ವಿರುದ್ಧ ಪೊಲೀಸರು ಅನಗತ್ಯ ಬಲಪ್ರಯೋಗ ಮಾಡಿದ್ದಾರೆ ಎಂದು ಆರೋಪಿಸಿದರು.