ಮುಂಬೈ(ಮಹಾರಾಷ್ಟ್ರ): ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಮತ್ತು ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರನ್ನು ನವೆಂಬರ್ 12ರವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿ ಬಾಂಬೆ ಹೈಕೋರ್ಟ್ ಆದೇಶಿಸಿದೆ.
ಶನಿವಾರವಷ್ಟೇ ದೇಶಮುಖ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ವಿಶೇಷ ಪಿಎಂಎಲ್ಎ ಕೋರ್ಟ್ ಆದೇಶ ಹೊರಡಿಸಿತ್ತು. ಇದಾದ ನಂತರ ಆರೋಪಿಯನ್ನು ಮುಂಬೈನ ಅರ್ಥರ್ ರೋಡ್ ಜೈಲಿಗೆ ಕರೆತರಲಾಗಿತ್ತು.
ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ಪಿಎಂಎಲ್ಎ ವಿಶೇಷ ಕೋರ್ಟ್ನ ಆದೇಶವನ್ನು ರದ್ದು ಮಾಡಿ, ದೇಶ್‌ಮುಖ್ ಅವರನ್ನು ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿತು. ಸುಮಾರು ಐದು ದಿನಗಳ ಕಾಲ ದೇಶ್‌ಮುಖ್ ಜಾರಿ ಅಧಿಕಾರಿಗಳಿಂದ ತನಿಖೆ ಮತ್ತು ವಿಚಾರಣೆಗೆ ಒಳಪಡಲಿದ್ದಾರೆ.
ಅಕ್ರಮ ಹಣ ವರ್ಗಾವಣೆ ಮತ್ತು ಸುಲಿಗೆ ಆರೋಪದ ಬೆನ್ನಲ್ಲೇ ದೇಶ್‌ಮುಖ್ ಅವರನ್ನು ನವೆಂಬರ್ 1ರಂದು ಬಂಧಿಸಲಾಗಿತ್ತು. ಮುಂಬೈನ ಮಾಜಿ ಪೊಲೀಸ್ ವರಿಷ್ಠಾಧಿಕಾರಿ ಪರಮ್ಬೀರ್ ಸಿಂಗ್ ಇವರ ಮೇಲೆ ಗಂಭೀರ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ: ಉಪ್ಪಿನಂಗಡಿಯಲ್ಲಿ ಮಾಜಿ ಸೈನಿಕನ ಮನೆ ಬಳಿ ಗ್ರೆನೇಡ್ಗಳು ಪತ್ತೆ