ಮುಂಬೈ: ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠವು 17 ವರ್ಷದ ಬಾಲಕಿಗೆ ತನ್ನ 24 ವಾರಗಳ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದ್ದು, ಇದು ಒಮ್ಮತದ ಸಂಬಂಧದ ಪರಿಣಾಮವಾಗಿದೆ ಮತ್ತು ಈ ಹಂತದಲ್ಲಿ ಮಗು ಜೀವಂತವಾಗಿ ಜನಿಸುತ್ತದೆ ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ರವೀಂದ್ರ ಘುಗೆ ಮತ್ತು ವೈ ಜಿ ಖೋಬ್ರಾಗಡೆ ಅವರಿದ್ದ ವಿಭಾಗೀಯ ಪೀಠವು ಜುಲೈ 26 ರಂದು ತನ್ನ ಆದೇಶದಲ್ಲಿ ತಿಳಿಸಿದೆ.
ನ್ಯಾಯಾಲಯ ಹೇಳಿಕೆ: ಅರ್ಜಿದಾರರು ಡಿಸೆಂಬರ್ 2022 ರಿಂದ ಹುಡಗನೊಂದಿಗೆ ಒಮ್ಮತದ ಸಂಬಂಧವನ್ನು ಹೊಂದಿ, ಹಲವು ಬಾರಿ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದಳು ಎಂದು ಪೀಠ ಗಮನಿಸಿದೆ. ಈ ವರ್ಷದ ಫೆಬ್ರವರಿಯಲ್ಲಿ ಬಾಲಕಿಯೇ ಸ್ವತಃ ಪ್ರೆಗ್ನೆನ್ಸಿ ಕಿಟ್ ತಂದು ಗರ್ಭಧಾರಣೆಯನ್ನು ದೃಢಪಡಿಸಿಕೊಂಡಿದ್ದಳು. ಆದ್ದರಿಂದ, ಅರ್ಜಿದಾರೆಯು ವಯಸ್ಕಳಾಗಿದ್ದು ತಿಳುವಳಿಕೆ ಮತ್ತು ಪೂರ್ಣ ಪ್ರಬುದ್ಧತೆಯನ್ನು ಹೊಂದಿದ್ದಾಳೆ ಎಂದು ತೋರುತ್ತದೆ. ಗರ್ಭ ಧರಿಸಲು ಆಸಕ್ತಿ ಇಲ್ಲದಿದ್ದರೆ, ಗರ್ಭಧಾರಣೆ ದೃಢಪಟ್ಟ ಬೆನ್ನಲ್ಲೇ ಗರ್ಭಪಾತಕ್ಕೆ ಅನುಮತಿ ಕೋರಬಹುದಿತ್ತು ಎಂದು ನ್ಯಾಯಪೀಠ ಹೇಳಿದೆ.
ಸಂತ್ರಸ್ತೆ ಅಪ್ರಾಪ್ತ ವಯಸ್ಸಿನವಳು ಆಗಿರುವುದರಿಂದ ಪೋಕ್ಸೊ ಕಾಯ್ದೆಯಡಿ ಗರ್ಭಪಾತಕ್ಕೆ ಅನುಮತಿ ಕೋರಿ ತನ್ನ ತಾಯಿಯ ಮೂಲಕ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾಳೆ. ಮೆಡಿಕಲ್ ಟರ್ಮಿನೇಷನ್ ಆಫ್ ಪ್ರಗ್ನೆನ್ಸಿ ಕಾಯ್ದೆ ಅಡಿಯಲ್ಲಿ, ಗರ್ಭ ದರಿಸಿ 20 ವಾರಗಳಿಗಿಂತ ಕಡಿಮೆ ಕಾಲವಾಗಿದ್ದರೆ ಗರ್ಭಪಾತಕ್ಕಾಗಿ ನ್ಯಾಯಾಲಯದ ಅನುಮತಿ ಅತ್ಯಗತ್ಯವಿರುತ್ತದೆ. ಆಗ ಮಗು ಮತ್ತು ತಾಯಿಯ ಜೀವಕ್ಕಿರುವ ಅಪಾಯವನ್ನು ಗಮನಿಸಿ, ನ್ಯಾಯಾಲಯ ಗರ್ಭಪಾತಕ್ಕೆ ಅನುಮತಿ ನೀಡುತ್ತದೆ.
ಭವಿಷ್ಯದಲ್ಲಿ ವೈದ್ಯೆ ಆಗಲು ಬಯಸಿರುವ ಸಂತ್ರಸ್ತೆಗೆ ಗರ್ಭಾವಸ್ಥೆಯು ಮಾನಸಿಕ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಸಂತ್ರಸ್ತ ಬಾಲಕಿಯನ್ನು ಪರೀಕ್ಷಿಸಿದ ನಂತರ ವೈದ್ಯಕೀಯ ಮಂಡಳಿಯು ಸಲ್ಲಿಸಿದ ವರದಿಯನ್ನು ಹೈಕೋರ್ಟ್ ಗಮನಕ್ಕೆ ತೆಗೆದುಕೊಂಡು, ಭ್ರೂಣದಲ್ಲಿ ಯಾವುದೇ ಅಪಾಯವಿಲ್ಲದೆ ಮಗುವಿನ ಬೆಳವಣಿಗೆಯು ಸಾಮಾನ್ಯವಾಗಿದೆ ಎಂದು ಹೇಳಿದೆ. ಈ ಹಂತದಲ್ಲಿ ಗರ್ಭಪಾತವಾದರೆ ಜನಿಸುವ ಮಗುವಿನ ಜೀವಕ್ಕೆ ಅಪಾಯ ಬಂದೊದಗಲಿದೆ.
ಗರ್ಭಾವಸ್ಥೆಯನ್ನು ಕೊನೆಗೊಳಿಸುವಂತೆ ತಾಯಿಯ ಕೋರಿಕೆಯನ್ನು ಪರಿಗಣಿಸಿ, ಬಲವಂತದ ಹೆರಿಗೆಯ ನಂತರವೂ ಮಗು ಜೀವಂತವಾಗಿ ಜನಿಸಿದರೆ, ಅದು ವಿರೂಪಗೊಳ್ಳುವ ಸಾಧ್ಯತೆಯಿದ್ದು, ಅಂಗವೈಕಲ್ಯಕ್ಕೆ ಕಾರಣವಾಗುತ್ತದೆ. ಮಗುವಿನ ಬೆಳವಣಿಗೆ ಆರೋಗ್ಯಕರವಾಗಿದ್ದು, ಹೆರಿಗೆಗೆ ಕೇವಲ 15 ವಾರಗಳು ಬಾಕಿ ಇರುವುದರಿಂದ ಗರ್ಭಪಾತಕ್ಕೆ ಅನುಮತಿಸಲು ಪೀಠ ಒಲವು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.
ಮಗುವಿನ ಜನನದ ನಂತರ ಅದನ್ನು ದತ್ತು ನೀಡಲು ಇಚ್ಛಿಸಿದರೆ ತಾಯಿಗೆ ಸ್ವಾತಂತ್ರ್ಯವಿರುತ್ತದೆ. ಪೂರ್ಣಾವಧಿಯಲ್ಲಿ ಮಗುವಿಗೆ ಜನ್ಮ ನೀಡಿದರೆ, ಯಾವುದೇ ಅಂಗ ವೈಕಲ್ಯಯಂತಹ ಸಮಸ್ಯೆಗಳಿಲ್ಲದೆ ಮಗು ಆರೋಗ್ಯಕರವಾಗಿರಲಿದ್ದು, ದತ್ತು ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೈಕೋರ್ಟ್ ಹೇಳಿದೆ.
ಇದನ್ನೂ ಓದಿ: Manipur violence: ಮಣಿಪುರ ವಿಡಿಯೋ ಪ್ರಕರಣ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಂತ್ರಸ್ತೆಯರು