ಮುಂಬೈ (ಮಹಾರಾಷ್ಟ್ರ): ಪೋಕ್ಸೊ ಕಾಯ್ದೆಯಡಿ ಬಂಧಿತನಾಗಿದ್ದ ಆರೋಪಿಗೆ ಜಾಮೀನು ನೀಡುವ ಸಂದರ್ಭದಲ್ಲಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 (ಅಸ್ವಾಭಾವಿಕ ಲೈಂಗಿಕತೆ) ಅಡಿಯಲ್ಲಿ ಚುಂಬನವು ಪ್ರಾಥಮಿಕವಾಗಿ ಅಪರಾಧವಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ತಿಳಿಸಿದೆ.
ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ ಅವರು ಮೇ 5 ರಂದು ನೀಡಿದ ಆದೇಶದಲ್ಲಿ, ಸಂತ್ರಸ್ತೆಯ ಹೇಳಿಕೆ ಮತ್ತು ಪ್ರಥಮ ಮಾಹಿತಿ ವರದಿ ಪ್ರಕಾರ ವ್ಯಕ್ತಿಯು ಸಂತ್ರಸ್ತೆಯ ಖಾಸಗಿ ಅಂಗಗಳನ್ನು ಮುಟ್ಟಿದ್ದಾನೆ ಹಾಗೂ ಆಕೆಯ ತುಟಿಗಳಿಗೆ ಮುತ್ತಿಟ್ಟಿದ್ದಾನೆ ಎಂದು ಸೂಚಿಸುತ್ತದೆ. ಈ ಪ್ರಕರಣ ಪರಿಶೀಲಿಸಿದಾಗ ಇದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ರ ಅಡಿಯಲ್ಲಿ ಪ್ರಾಥಮಿಕವಾಗಿ ಅಪರಾಧವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377, 384, 420 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ, 2012 ರ ಸೆಕ್ಷನ್ 8 ಮತ್ತು 12 ರ ಅಡಿಯಲ್ಲಿ ವಿಕಾಸ್ ಮೋಹನ್ ಲಾಲ್ ಖೇಲಾನಿ ಮೇಲೆ ಪ್ರಕರಣ ದಾಖಲಾಗಿತ್ತು. ಅವರಿಗೆ ಜಾಮೀನು ನೀಡುವಾಗ ನ್ಯಾಯಾಲಯವು ಈ ಹೇಳಿಕೆಯನ್ನು ದಾಖಲಿಸಿದೆ.
ವಿಕಾಸ್ ಮೋಹನ್ ಲಾಲ್ ಖೇಲಾನಿ ಸುಮಾರು ಒಂದು ವರ್ಷದಿಂದ ಬಂಧನದಲ್ಲಿದ್ದಾರೆ. ಹಾಗೆ ಇವರ ವಿರುದ್ಧ ಕೇಳಿಬಂದಿರುವ ಆರೋಪವನ್ನು ಇನ್ನೂ ಸಾಬೀತುಪಡಿಸಿಲ್ಲ. ಪರಿಣಾಮ ಮುಂದಿನ ದಿನಗಳಲ್ಲಿ ವಿಚಾರಣೆ ಪ್ರಾರಂಭವಾಗುವ ಸಾಧ್ಯತೆಯೂ ಹೆಚ್ಚಿಲ್ಲ ಎಂದು ನ್ಯಾಯಮೂರ್ತಿಗಳು ತಿಳಿಸಿ ಜಾಮೀನು ಮಂಜೂರು ಮಾಡಿದ್ದಾರೆ.
ಆರೋಪ ಏನು?: ಸಂತ್ರಸ್ತೆಯ ತಂದೆ ದಾಖಲಿಸಿದ ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ಅನ್ವಯ ವಿಕಾಸ್ ವಿರುದ್ಧ ಅಪರಾಧವೆಂದು ದಾಖಲಾಗಿದೆ. ಏಪ್ರಿಲ್ 17, 2021 ರಂದು ಬೀರುವಿನಲ್ಲಿ ಇಟ್ಟಿದ್ದ ಹಣ ಕಾಣೆಯಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದಾಗ ಸಂತ್ರಸ್ತೆ ಆನ್‌ಲೈನ್ ಗೇಮ್ ಆಟಕ್ಕೆ ಅದನ್ನು ಬಳಕೆ ಮಾಡಿಕೊಂಡಿದ್ದಳಂತೆ. ಅಲ್ಲದೆ, ಗೇಮಿಂಗ್ ಆ್ಯಪ್‌ಗೆ ರಿಚಾರ್ಜ್ ಮಾಡಲು ಹಣವನ್ನು ಪಾವತಿಸಲು ಹೋದಾಗ ವಿಕಾಸ್ ಲೈಂಗಿಕ ಕಿರುಕುಳ ನೀಡಿದ್ದ ಎಂದು ದೂರು ದಾಖಲಾಗಿತ್ತು.
ಇದನ್ನೂ ಓದಿ : ಕರ್ತವ್ಯಲೋಪ ಆರೋಪ: ಹನೂರು ತಹಶೀಲ್ದಾರ್ಗೆ ಕಡ್ಡಾಯ ರಜೆ, ಮತ್ತೊಬ್ಬರಿಗೆ ವರ್ಗಾವಣೆ ಶಿಕ್ಷೆ