ಮುಂಬೈ(ಮಹಾರಾಷ್ಟ್ರ): ಭಾರತೀಯ ರಿಸರ್ವ್ ಬ್ಯಾಂಕ್ನ(ಆರ್‌ಬಿಐ) ಮುಂಬೈ ಕಚೇರಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಗವರ್ನರ್ ಇ-ಮೇಲ್‌ಗೆ ಸಂದೇಶ ಬಂದಿದೆ. ಆರ್‌ಬಿಐ ಉನ್ನತ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ. ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇಂದು ಬೆಳಿಗ್ಗೆ 10:50ರ ಸಮಾರಿಗೆ 'ಖಲೀಫತ್ ಇಂಡಿಯಾ'ದ ಇ-ಮೇಲ್ (khalifatindia@gmail.com) ಐಡಿಯಿಂದ ಈ ಬೆದರಿಕೆ ಬಂದಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಮೇಲ್ ಕಳುಹಿಸಿದ ವ್ಯಕ್ತಿಗಾಗಿ ಶೋಧ ನಡೆಯುತ್ತಿದೆ ಎಂದು ಮುಂಬೈ ಉಪ ಪೊಲೀಸ್ ಆಯುಕ್ತ ರಾಜ್ ತಿಲಕ್ ರೋಷನ್ ಹೇಳಿದ್ದಾರೆ.
ಇಮೇಲ್‌ನಲ್ಲಿ, ''ನಾವು ಮುಂಬೈನ ವಿವಿಧ ಸ್ಥಳಗಳಲ್ಲಿ 11 ಬಾಂಬ್‌ಗಳನ್ನು ಇರಿಸಿದ್ದೇವೆ. ಭಾರತೀಯ ರಿಸರ್ವ್ ಬ್ಯಾಂಕ್ ಹಾಗು ಖಾಸಗಿ ಬ್ಯಾಂಕ್‌ಗಳಲ್ಲೂ ಬಾಂಬ್ ಇಡಲಾಗಿದೆ. ಈ ಬ್ಯಾಂಕ್‌ಗಳು ಭಾರತದ ಇತಿಹಾಸದಲ್ಲೇ ಅತಿದೊಡ್ಡ ಹಗರಣ ಮಾಡಿವೆ. ಗವರ್ನರ್ ಶಕ್ತಿಕಾಂತ ದಾಸ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೆಲವು ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳು ಮತ್ತು ಕೆಲವು ಮಾಜಿ ಮಂತ್ರಿಗಳೂ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಖಚಿತ ಪುರಾವೆಗಳಿವೆ'' ಎಂದು ಉಲ್ಲೇಖಿಸಲಾಗಿದೆ.
''ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನ್ಯೂ ಸೆಂಟ್ರಲ್ ಆಫೀಸ್ ಬಿಲ್ಡಿಂಗ್ ಫೋರ್ಟ್, ಮುಂಬೈ ಮತ್ತು ಎಚ್‌ಡಿಎಫ್‌ಸಿ ಹೌಸ್ ಚರ್ಚ್‌ಗೇಟ್, ಮುಂಬೈ, ಐಸಿಐಸಿಐ ಬ್ಯಾಂಕ್ ಟವರ್ಸ್ ಬಿಕೆಸಿ, ಮುಂಬೈ.. ಈ ಮೂರು ಸ್ಥಳಗಳಲ್ಲಿ ಮಧ್ಯಾಹ್ನ 1:30ಕ್ಕೆ ಬಾಂಬ್ ಸ್ಫೋಟಿಸಲಿವೆ. ಆರ್‌ಬಿಐ ಗವರ್ನರ್ ಮತ್ತು ಹಣಕಾಸು ಸಚಿವರು ತಕ್ಷಣ ರಾಜೀನಾಮೆ ನೀಡಬೇಕು. ಈ ಕುರಿತು ಪತ್ರಿಕಾ ಹೇಳಿಕೆ ನೀಡಬೇಕು ಎಂದು ನಾವು ಒತ್ತಾಯಿಸುತ್ತೇವೆ. ಅದೇ ರೀತಿ ಈ ಇಬ್ಬರು ಹಾಗೂ ಹಗರಣದಲ್ಲಿ ಭಾಗಿಯಾಗಿರುವ ಇತರರ ವಿರುದ್ಧವೂ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇವೆ. ಮಧ್ಯಾಹ್ನ 1:30ರೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, ಎಲ್ಲ 11 ಬಾಂಬ್‌ಗಳನ್ನು ಒಂದರ ನಂತರ ಒಂದರಂತೆ ಸ್ಫೋಟಿಸಲಾಗುವುದು'' ಎಂಬುದಾಗಿ ಬೆದರಿಕೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಮುಂಬೈ ಏರ್‌ಪೋರ್ಟ್ ಟರ್ಮಿನಲ್ 2ಗೆ ಸ್ಫೋಟ ಬೆದರಿಕೆ; ಬಿಟ್‌ಕಾಯಿನ್ ರೂಪದಲ್ಲಿ $1 ಮಿಲಿಯನ್‌ಗೆ ಬೇಡಿಕೆ