ನವದೆಹಲಿ: ಇಂದು (ಶುಕ್ರವಾರ) ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಬೇಕಿದ್ದ ದೆಹಲಿ- ಪುಣೆ ವಿಸ್ತಾರಾ ವಿಮಾನಕ್ಕೆ ಇಲ್ಲಿನ ಜಿಎಂಆರ್ ಗ್ರೂಪ್ ನಡೆಸುತ್ತಿರುವ ಕಾಲ್ ಸೆಂಟರ್‌ಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಶೀಘ್ರದಲ್ಲೇ, ಭದ್ರತಾ ಏಜೆನ್ಸಿಗಳ ಸರಿಯಾದ ತಪಾಸಣೆಗಾಗಿ ವಿಮಾನವನ್ನು ಪ್ರತ್ಯೇಕವಾಗಿ ಇರಿಸಲಾಯಿತು. ವಿಮಾನದಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ(ಐಜಿಐ) ವಿಮಾನ ನಿಲ್ದಾಣದಲ್ಲಿ ಕಾಲ್ ಸೆಂಟರ್‌ಗೆ ಬಾಂಬ್ ಕರೆ ಬೆದರಿಕೆ ಬಂದ ನಂತರ ವಿಮಾನವನ್ನು ಖಾಲಿ ಮಾಡಲಾಗಿದೆ.
ವಿಮಾನದಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರು: ಬೆಳಗ್ಗೆ 8.30ಕ್ಕೆ ವಿಮಾನ ಹೊರಡಬೇಕಿತ್ತು. ಯುಕೆ-971 ವಿಮಾನವು ದೆಹಲಿಯಿಂದ ಪುಣೆಗೆ ಹೋಗ ಬೇಕಿತ್ತು. ಆದ್ರೆ ಗುರುಗ್ರಾಮ್‌ನಲ್ಲಿರುವ ಜಿಎಂಆರ್ ಕಾಲ್ ಸೆಂಟರ್‌ಗೆ ಬಾಂಬ್ ಬೆದರಿಕೆ ಬಂದಿತ್ತು ಎಂದು ಭದ್ರತಾ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಮಾನದಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಎಲ್ಲ ಪ್ರಯಾಣಿಕರ ಲಗೇಜ್‌ಗಳನ್ನು ಡಿ-ಬೋರ್ಡಿಂಗ್ ಮಾಡಲಾಗಿದೆ. ಪ್ರಯಾಣಿಕರು ಪ್ರಸ್ತುತ ಟರ್ಮಿನಲ್ ಕಟ್ಟಡದಲ್ಲಿದ್ದಾರೆ. ಅವರಿಗೆ ಉಪಾಹಾರವನ್ನು ನೀಡಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಏನಿದೆ?: ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಪ್ರಕಾರ, ಭದ್ರತಾ ಏಜೆನ್ಸಿಗಳು ಅನುಮತಿ ನೀಡುವವರೆಗೆ ವಿಮಾನಗಳ ವೇಳೆಯನ್ನು ನಿಗದಿಪಡಿಸಲಾಗುವುದಿಲ್ಲ. ಭದ್ರತಾ ಏಜೆನ್ಸಿಗಳಿಂದ ಅಂತಿಮ ಅನುಮತಿ ದೊರೆತ ತಕ್ಷಣ ವಿಮಾನವು ನಿಗದಿಪಡಿಸಿದ ಸ್ಥಳದಿಂದ ಹೊರಡಲಿದೆ. ಇಂದು ಬೆಳಗ್ಗೆ 8.52ರ ಸುಮಾರಿಗೆ ಬೆದರಿಕೆ ಕರೆ ಬಂದಿದೆ. ಕೂಡಲೇ ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.
ಗ್ರಾಹಕರು ಮತ್ತು ಸಿಬ್ಬಂದಿಯ ಸುರಕ್ಷತೆ ಅತ್ಯಂತ ಮುಖ್ಯ- ವಕ್ತಾರರು: "ಶುಕ್ರವಾರ ದೆಹಲಿಯಿಂದ ಪುಣೆಗೆ ಹಾರಲು ಯೋಜಿಸಲಾದ ಯುಕೆ 971 ವಿಮಾನವು ಕಡ್ಡಾಯ ಭದ್ರತಾ ತಪಾಸಣೆಗಳಿಂದ ವಿಳಂಬವಾಗಿದೆ ಎಂದು ನಾವು ಖಚಿತಪಡಿಸುತ್ತೇವೆ" ಎಂದು ವಿಸ್ತಾರಾ ವಿಮಾನ ಯಾನ ಸಂಸ್ಥೆ ವಕ್ತಾರರು ಹೇಳಿದರು. "ನಾವು ಅದಕ್ಕಾಗಿ ಸಂಬಂಧಿತ ಭದ್ರತಾ ಏಜೆನ್ಸಿಗಳೊಂದಿಗೆ ಸಹಕರಿಸುತ್ತಿದ್ದೇವೆ. ಈ ಮಧ್ಯೆ, ನಮ್ಮ ಗ್ರಾಹಕರಿಗೆ ಉಪಹಾರಗಳನ್ನು ನೀಡಲಾಗಿದೆ. ಪ್ರಯಾಣಿಕರಿಗೆ ಆದ ಅನಾನುಕೂಲತೆಯನ್ನು ಕಡಿಮೆ ಮಾಡಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ವಿಸ್ತಾರಾ ವಿಮಾನದಲ್ಲಿ, ನಮ್ಮ ಗ್ರಾಹಕರು ಮತ್ತು ಸಿಬ್ಬಂದಿಯ ಸುರಕ್ಷತೆ ನಮಗೆ ಅತ್ಯಂತ ಮುಖ್ಯವಾಗಿದೆ” ಎಂದು ವಕ್ತಾರರು ಹೇಳಿದರು.
ಇದನ್ನೂ ಓದಿ: ಬಿಹಾರದ ಅರಾರಿಯಾದಲ್ಲಿ ಪತ್ರಕರ್ತನ ಹತ್ಯೆ: ಮನೆಗೆ ನುಗ್ಗಿದ ದುಷ್ಕರ್ಮಿಗಳಿಂದ ಗುಂಡಿನ ದಾಳಿ..!