ಕೋಲ್ಕತ್ತಾ, ಪಶ್ಚಿಮಬಂಗಾಳ: ನಗರದ ಭಾರತೀಯ ವಸ್ತುಸಂಗ್ರಹಾಲಯವನ್ನು ಸ್ಫೋಟಿಸುವುದಾಗಿ ಬಾಂಬ್ ಬೆದರಿಕೆ ಬಂದಿದೆ. ಈ ಕುರಿತು ಪೊಲೀಸರಿಗೆ ಬೆದರಿಕೆ ಮೇಲ್ ಬಂದಿದೆ. ಮಾಹಿತಿ ತಿಳಿದು ಕೋಲ್ಕತ್ತಾ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದ ತಂಡದವರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ, ವಸ್ತುಸಂಗ್ರಹಾಲಯಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ ಎಂದು ಕೋಲ್ಕತ್ತಾ ಪೊಲೀಸರು ಮಾಹಿತಿ ನೀಡಿದ್ದಾರೆ.
ಟೆರರಿಸ್ಟ್ಸ್ 111 ಹೆಸರಿನ ಗುಂಪಿನಿಂದ ನಗರದ ಪೊಲೀಸರಿಗೆ ಮೇಲ್ ಕಳುಹಿಸಲಾಗಿದೆ. ಕೋಲ್ಕತ್ತಾದಲ್ಲಿರುವ ಭಾರತೀಯ ಮ್ಯೂಸಿಯಂ ಮೇಲೆ ಬಾಂಬ್ ಸ್ಫೋಟಿಸುವ ಯೋಜನೆ ಇದೆ ಎಂದು ಈ ಬೆದರಿಕೆ ಮೇಲ್‌ನಲ್ಲಿ ಹೇಳಲಾಗಿದೆ. ಬಳಿಕ ಪೊಲೀಸರು ಕಾರ್ಯಪ್ರವೃತ್ತರಾಗಿ ಬಾಂಬ್ ಸ್ಕ್ವಾಡ್‌ನೊಂದಿಗೆ ಸ್ಥಳಕ್ಕೆ ಆಗಮಿಸಿದ್ದಾರೆ.
ಇಮೇಲ್ ಕಳುಹಿಸಿದವರು ಉಗ್ರಗಾಮಿ ಸಂಘಟನೆ ಎಂದು ಹೇಳಿಕೊಂಡಿದ್ದಾರೆ. ಭಾರತೀಯ ವಸ್ತುಸಂಗ್ರಹಾಲಯದ ಹಲವು ಸ್ಥಳಗಳಲ್ಲಿ ಬಾಂಬ್ ಇರಿಸಿದ್ದೇವೆ. ತಮ್ಮ ಸಂಘಟನೆಗೆ ಹೆಚ್ಚಿನ ಮನ್ನಣೆ ನೀಡದಿದ್ದರೆ ಮ್ಯೂಸಿಯಂ ಅನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪಾರಂಪರಿಕ ಕಟ್ಟಡದತ್ತ ಉನ್ನತ ಪೊಲೀಸ್ ಅಧಿಕಾರಿಗಳು, ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ವಿನೀತ್ ಗೋಯೆಲ್, ಕೋಲ್ಕತ್ತಾ ಪೊಲೀಸ್ ಮತ್ತು ಎಸ್‌ಟಿಎಫ್‌ನ ಡಿಟೆಕ್ಟಿವ್‌ಗಳು, ಕಮಾಂಡೋಗಳು ದೌಡಾಯಿಸಿ ಪರಿಶೀಲನೆ ಕೈಗೊಂಡಿದ್ದಾರೆ.
ಕಳೆದ ಕೆಲ ದಿನಗಳಿಂದ, ದೇಶದ ಅನೇಕ ಕಡೆ ಬಾಂಬ್ ಬೆದರಿಕೆ ಕರೆ ಹಾಗೂ ಸಂದೇಶಗಳು ಬರುತ್ತಿವೆ. ಆದ್ರೆ ಹೆಚ್ಚಿನ ಬೆದರಿಕೆಗಳು ನಕಲಿ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಇದೇ ರೀತಿಯ ಬೆದರಿಕೆಯಿಂದಾಗಿ ಎಲ್ಲಾ ಶಾಲೆಗಳನ್ನು ಒಂದು ದಿನ ಮುಚ್ಚಲಾಗಿತ್ತು. ಕರ್ನಾಟಕದ ರಾಜಭವನವನ್ನು ಸ್ಫೋಟಿಸುವುದಾಗಿ ಶಂಕಿತ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದ. ಆದರೆ, ಆರೋಪಿ ಬಂಧನದ ನಂತರ ಅದೊಂದು ನಕಲಿ ಕರೆ ಎಂಬುದು ತಿಳಿದುಬಂದಿತ್ತು. ಇತ್ತೀಚೆಗಷ್ಟೇ ಜನವರಿ 22ರಂದು ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರತಿಷ್ಟಾಪನೆ ವೇಳೆ ಬಾಂಬ್ ಸ್ಫೋಟ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು.
ಹೊಸ ವರ್ಷಕ್ಕೆ ಒಂದು ದಿನ ಮುನ್ನ ಮುಂಬೈನಲ್ಲಿ ಸರಣಿ ಸ್ಫೋಟದ ಬೆದರಿಕೆ ಬಂದಿತ್ತು. ಡಿಸೆಂಬರ್ 31 ರಂದು ವ್ಯಕ್ತಿಯೊಬ್ಬರು ಪೊಲೀಸ್ ಸಂಖ್ಯೆಗೆ ಕರೆ ಮಾಡಿ ಮುಂಬೈನಲ್ಲಿ ಸ್ಫೋಟ ಸಂಭವಿಸಲಿದೆ ಎಂದು ಹೇಳಿ ಕಾಲ್ ಕಟ್ ಮಾಡಿದ್ದರು. ಇದಾದ ಬಳಿಕ ಮುಂಬೈನ ಮೂಲೆ ಮೂಲೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ, ಕರೆ ಮಾಡಿದ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ತಿಳಿದಿತ್ತು. ಅಲ್ಲದೆ, ಕೆಲ ದಿನಗಳ ಹಿಂದೆ ಮುಂಬೈನ ಹಲವು ಬ್ಯಾಂಕ್‌ಗಳನ್ನು ಸ್ಫೋಟಿಸುವ ಬಗ್ಗೆ ಬೆದರಿಕೆಗಳು ಬಂದಿದ್ದವು.
ಓದಿ: ಶಾಲೆಯಲ್ಲಿ ಬಾಲ್ ಎಂದು ತಿಳಿದು ಬಾಂಬ್ ಜೊತೆ ಆಟ; ಸ್ಫೋಟಗೊಂಡು ವಿದ್ಯಾರ್ಥಿ ಸಾವು, ಹಲವರಿಗೆ ಗಾಯ