ಭಟ್ಪಾರ (ಪಶ್ಚಿಮ ಬಂಗಾಳ): ಇಲ್ಲಿನ ಉತ್ತರ 24 ಪರಗಣ ಜಿಲ್ಲೆಯಲ್ಲಿ ರೈಲ್ವೆ ಹಳಿಯ ಬಳಿ ಬಾಂಬ್ ಸ್ಫೋಟಗೊಂಡು 7 ವರ್ಷದ ಬಾಲಕ ಮೃತಪಟ್ಟು, ಇಬ್ಬರು ಗಾಯಗೊಂಡರು. ಕೋಲ್ಕತ್ತಾದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಕಾಕಿನಾರಾ ಮತ್ತು ಜಗದ್ದಾಲ್ ನಿಲ್ದಾಣಗಳ ನಡುವೆ ಬೆಳಗ್ಗೆ 8.30 ರ ಸುಮಾರಿಗೆ ಘಟನೆ ಸಂಭವಿಸಿದೆ.
ತಪ್ಪಿದ ದುರಂತ: ಯಾರೋ ಕಿಡಿಗೇಡಿಗಳು ಬಾಂಬ್ ಅನ್ನು ರೈಲ್ವೆ ಹಳಿ ಪಕ್ಕದಲ್ಲಿಟ್ಟಿದ್ದು, ಬಾಲಕ ತನ್ನ ಇಬ್ಬರು ಸ್ನೇಹಿತರೊಂದಿಗೆ ಆಟವಾಡಲೆಂದು ತೆಗೆದುಕೊಂಡಿದ್ದಾನೆ. ಈ ವೇಳೆ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ತೀವ್ರತೆಗೆ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಗಾಯಗೊಂಡಿದ್ದ ಇನ್ನಿಬ್ಬರು ಬಾಲಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಹಳಿ ಪಕ್ಕದಲ್ಲೇ ಬಾಂಬ್ ಇಟ್ಟಿದ್ದು, ಈ ಮಾರ್ಗವಾಗಿ ಬರುವ ರೈಲನ್ನು ಉಡಾಯಿಸುವ ಸಂಚು ರೂಪಿಸಲಾಗಿರುವ ಬಗ್ಗೆ ಶಂಕೆ ಮೂಡಿದೆ.
ಘಟನೆಯ ಬಳಿಕ ಬಾಂಬ್ ನಿಷ್ಕ್ರೀಯ ದಳ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದಾಗ ಇನ್ನೊಂದು ಬಾಂಬ್ ಹಳಿಯ ಪಕ್ಕದ ಮರದಡಿ ಕಂಡುಬಂದಿದೆ. ಇದನ್ನು ನಿಷ್ಕ್ರಿಯ ಮಾಡಲಾಗಿದೆ. ಈ ಮಾರ್ಗವಾಗಿ ಬರುವ ರೈಲುಗಳಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದ್ದು, ಸ್ಥಳ ಪರಿಶೀಲನೆ ಕಾರ್ಯ ಮುಂದುವರಿದಿದೆ.
ಇದನ್ನೂ ಓದಿ: ಬೆಳ್ತಂಗಡಿ: ತೀವ್ರ ಜ್ವರದಿಂದ ಒಂದೇ ಮನೆಯ ಇಬ್ಬರು ಮಕ್ಕಳು ಸಾವು