ಪುಣೆ(ಮಹಾರಾಷ್ಟ್ರ): ಬಿಜೆಪಿ ಮಾಜಿ ವಿಧಾನಪರಿಷತ್ ಸದಸ್ಯರೊಬ್ಬರ ಬಂಗಲೆಯ ಹಿಂಭಾಗದಲ್ಲಿ ಮಹಿಳೆಯ ಕೊಳೆತ ಮೃತದೇಹವು ಭಾಗಶಃ ಹೂತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸತಾರಾ ಜಿಲ್ಲೆಯ ಗ್ರಾಮವೊಂದರಲ್ಲಿ ಮಹಾರಾಷ್ಟ್ರದ ಮಾಜಿ ಎಂಎಲ್‌ಸಿ ಕಾಂತ ನಾಲವಾಡೆ ಅವರ ಕುಟುಂಬ ಸದಸ್ಯರು ಬಂಗಲೆಯ ಆವರಣ ಸ್ವಚ್ಛಗೊಳಿಸುತ್ತಿದ್ದಾಗ ಶವ ಪತ್ತೆಯಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಎಂಎಲ್‌ಸಿ ಮನೆಯವರು ಕೆಲವೊಮ್ಮೆ ಮಾತ್ರ ಬಂಗಲೆಯಲ್ಲಿ ಇರುತ್ತಿದ್ದರು. ಹೀಗಾಗಿ ಬಂಗಲೆಗೆ ಬೀಗ ಹಾಕಲಾಗಿತ್ತು. ಶುಕ್ರವಾರ ಕುಟುಂಬಸ್ಥರು ಬಂಗಲೆ ಆವರಣದಲ್ಲಿ ಸ್ವಚ್ಛಗೊಳಿಸುತ್ತಿರುವಾಗ ಮಣ್ಣಿನಲ್ಲಿ ಭಾಗಶಃ ಹುದುಗಿದ್ದ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಕೊಳೆತ ಶವ ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಶವ ಪತ್ತೆಯಾದ ತಕ್ಷಣ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರತಿಕ್ರಿಯೆ: ಪ್ರಕರಣದ ಕುರಿತು ಸತಾರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಮೀರ್ ಶೇಖ್ ಮಾತನಾಡಿ, 'ನಾವು ಬಂಗಲೆ ಆವರಣದಿಂದ ಮಹಿಳೆಯ ಕೊಳೆತ ಶವವನ್ನು ವಶಪಡಿಸಿಕೊಂಡಿದ್ದೇವೆ. ಎಲ್ಲ ಕೋನಗಳಲ್ಲಿ ಪರಿಶೀಲನೆ ನಡೆಯುತ್ತಿದೆ. ಶೀಘ್ರದಲ್ಲೇ ಮೃತರ ಗುರುತು ಪತ್ತೆ ಹಚ್ಚಲಾಗುವುದು ಮತ್ತು ತನಿಖೆ ನಡೆಯುತ್ತಿದೆ' ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಉಳ್ಳಾಲ: ಚರಂಡಿಯಲ್ಲಿ ಸೆಕ್ಯುರಿಟಿ ಗಾರ್ಡ್ ಶವ ಪತ್ತೆ