ಚಂಡೀಗಢ (ಹರಿಯಾಣ): ಹರಿಯಾಣದ ಗುರುಗ್ರಾಮ್‌ನ ಹೋಟೆಲ್‌ವೊಂದರಲ್ಲಿ ಹತ್ಯೆಗೀಡಾದ ಮಾಜಿ ಮಾಡೆಲ್ ದಿವ್ಯಾ ಪಹುಜಾ ಮೃತದೇಹವು ಫತೇಹಾಬಾದ್ ಜಿಲ್ಲೆಯ ಕಾಲುವೆಯಲ್ಲಿ ಪತ್ತೆಯಾಗಿದೆ. ಇಲ್ಲಿನ ತೋಹಾನಾದಲ್ಲಿರುವ ಭಾಕ್ರಾ ಕಾಲುವೆಯಿಂದ ಮೃತದೇಹವನ್ನು ಹೊರತೆಗೆಯಲಾಗಿದೆ ಎಂದು ಗುರುಗ್ರಾಮ್ ಅಪರಾಧ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ವರುಣ್ ಕುಮಾರ್ ದಹಿಯಾ ತಿಳಿಸಿದ್ದಾರೆ.
ಜನವರಿ 2ರಂದು ಗುರುಗ್ರಾಮ್‌ನ ಹೋಟೆಲ್ ಕೊಠಡಿಯಲ್ಲಿ 27 ವರ್ಷದ ದಿವ್ಯಾ ಪಹುಜಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅಶ್ಲೀಲ ಚಿತ್ರಗಳನ್ನಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಹೋಟೆಲ್ ಮಾಲೀಕರಿಂದ ಹಣ ವಸೂಲಿ ಮಾಡಿದ್ದ ಕಾರಣಕ್ಕಾಗಿ ಇವರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ದಿವ್ಯಾ ವಿರುದ್ಧ ಕೇಳಿ ಬಂದ ವಂಚನೆಯ ಆರೋಪವನ್ನು ಈಗಾಗಲೇ ಸಂತ್ರಸ್ತೆಯ ಕುಟುಂಬವು ತಳ್ಳಿಹಾಕಿದೆ.
ಮತ್ತೊಂದೆಡೆ, ಹೋಟೆಲ್‌ನಲ್ಲಿ ದಿವ್ಯಾ ಪಹುಜಾ ಅವರನ್ನು ಕೊಲೆ ಮಾಡಿ ಮೃತದೇಹವನ್ನು ಅಲ್ಲಿಂದ ಸಾಗಿಸಲಾಗಿತ್ತು. ಶವ ಸಾಗಿಸುವ ದೃಶ್ಯಗಳು ಸಿಸಿಟಿವಿಯಲ್ಲೂ ಸೆರೆಯಾಗಿದ್ದವು. ಇದರ ಆಧಾರದ ಮೇಲೆ ಐವರು ಆರೋಪಿಗಳು ಈ ಹತ್ಯೆಯಲ್ಲಿ ಭಾಗಿಯಾಗಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಈ ಪೈಕಿ ಹೋಟೆಲ್ ಮಾಲೀಕ ಅಭಿಜೀತ್ ಸಿಂಗ್, ನೇಪಾಳ ಮೂಲದ ಹೇಮರಾಜ್ ಮತ್ತು ಪಶ್ಚಿಮ ಬಂಗಾಳದ ಓಂಪ್ರಕಾಶ್ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಇದೀಗ ಸುಮಾರು 10 ದಿನಗಳ ಬಳಿಕ ದಿವ್ಯಾ ಪಹುಜಾ ಮೃತದೇಹ ಪತ್ತೆಯಾಗಿದೆ.
ಪ್ರಕರಣದ ಹಿನ್ನೆಲೆ: ದಿವ್ಯಾ ಪಹುಜಾ ಜನವರಿ 1ರ ನಂತರ ಕುಟುಂಬಸ್ಥರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಆ ದಿನ ಹೋಟೆಲ್ ಮಾಲೀಕ ಅಭಿಜೀತ್ ಭೇಟಿಯಾಗಲು ದಿವ್ಯಾ ಹೋಗಿದ್ದರು. ಮರು ದಿನ ಎಂದರೆ, ಜನವರಿ 2ರಂದು ಬೆಳಗ್ಗೆ 11.50ರ ಸುಮಾರಿಗೆ ಅವರೊಂದಿಗೆ ನಾನು ಕೊನೆಯದಾಗಿ ಮಾತನಾಡಿರುವುದಾಗಿ ಸಹೋದರಿ ನೈನಾ ಪಹುಜಾ ಹೇಳಿದ್ದರು. ಇದಾದ ಬಳಿಕ ಜನವರಿ 5ರಂದು ಹೋಟೆಲ್‌ನ ಕೊಠಡಿಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದವು. ಇದರಿಂದ ಅನುಮಾನಗೊಂಡ ಪರಿಶೀಲಿಸಿದಾಗ ಹೋಟೆಲ್‌ನಲ್ಲಿ ದಿವ್ಯಾರ ಉಂಗುರ, ಬೂಟು ಮತ್ತು ಇತರ ವಸ್ತುಗಳು ಪತ್ತೆಯಾಗಿದ್ದವು ಎಂದು ಪೊಲೀಸರಿಗೆ ನೈನಾ ದೂರು ಕೊಟ್ಟಿದ್ದರು.
ಅಲ್ಲದೇ, ಗ್ಯಾಂಗ್ಸ್ಟರ್ ಸಂದೀಪ್ ಗಡೋಲಿ ಎಂಬಾತನ ಕೊಲೆ ಪ್ರಕರಣದಲ್ಲಿ ದಿವ್ಯಾ ಪ್ರಮುಖ ಸಾಕ್ಷಿಯಾಗಿದ್ದರು. ಈ ಪ್ರಕರಣದಲ್ಲಿ ದಿವ್ಯಾ ಅವರಿಗೆ ಜೀವ ಬೆದರಿಕೆ ಇತ್ತು. ಗ್ಯಾಂಗ್ಸ್ಟರ್ನ ಸಂಬಂಧಿಕರು ದಿವ್ಯಾ ಅವರನ್ನು ಕೊಲೆ ಮಾಡಲು ಅಭಿಜೀತ್‌ಗೆ ಹಣ ಕೊಟ್ಟು ಸುಪಾರಿ ನೀಡಿದ್ದಾರೆ ಎಂದು ನೈನಾ ಪಹುಜಾ ತನ್ನ ದೂರಿನಲ್ಲಿ ತಿಳಿಸಿದ್ದರು. ಇದರ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದರು.
ಆಗ ದಿವ್ಯಾ ಅವರನ್ನು ಕೊಂದ ನಂತರ ಅಭಿಜೀತ್ ಆಕೆಯ ಶವವನ್ನು ಎಳೆದುಕೊಂಡು ಹೋಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಅಲ್ಲದೇ, ಶವವನ್ನು ನೀಲಿ ಬಿಎಂಡಬ್ಲ್ಯು ಕಾರಿನಲ್ಲಿ ಸಾಗಿಸುತ್ತಿರುವ ದೃಶ್ಯಗಳು ದಾಖಲಾಗಿದ್ದವು. ಇದನ್ನು ಆಧರಿಸಿ ಪೊಲೀಸರು ಹೋಟೆಲ್ ಮಾಲೀಕ ಅಭಿಜೀತ್ ಸೇರಿ ಮೂವರನ್ನು ಬಂಧಿಸಿದ್ದರು.
ನಕಲಿ ಎನ್ಕೌಂಟರ್ನಲ್ಲಿ ಜೈಲು ಸೇರಿದ್ದ ದಿವ್ಯಾ: 2016ರ ಫೆಬ್ರವರಿ 6ರಂದು ಮುಂಬೈನಲ್ಲಿ ಗ್ಯಾಂಗ್ಸ್ಟರ್ ಸಂದೀಪ್ ಗಡೋಲಿಯನ್ನು ಹರಿಯಾಣ ಪೊಲೀಸರು ಶೂಟೌಟ್ ಮಾಡಿದ್ದರು. ಆದರೆ, ಇದೊಂದು ನಕಲಿ ಎನ್‌ಕೌಂಟರ್ ಎಂದು ಹೇಳಲಾಗಿದೆ. ಎದುರಾಳಿ ಗುಂಪಿನ ವೀರೇಂದ್ರ ಕುಮಾರ್ ಅಲಿಯಾಸ್ ಬಿಂದರ್ ಗುಜ್ಜರ್ ಹರಿಯಾಣ ಪೊಲೀಸ್ ಅಧಿಕಾರಿಗಳೊಂದಿಗೆ ಸೇರಿಕೊಂಡು ಗಡೋಲಿಯನ್ನು ಕೊಲೆ ಮಾಡುವ ಸಂಚು ರೂಪಿಸಿದ್ದರು ಎಂಬ ಆರೋಪವಿತ್ತು.
ಇದಕ್ಕಾಗಿ ದಿವ್ಯಾ ಪಹುಜಾ ಮೂಲಕ ಸಂದೀಪ್ ಗಡೋಲಿಯನ್ನು ಹನಿ ಟ್ರ್ಯಾಪ್ ಮಾಡಲಾಗಿತ್ತು ಎಂಬ ಆರೋಪದ ಇತ್ತು. ಈ ಸಂಬಂಧ ಮುಂಬೈ ಪೊಲೀಸರು ದಿವ್ಯಾ, ಆಕೆಯ ತಾಯಿ ಮತ್ತು ಐವರು ಪೊಲೀಸ್ ಸಿಬ್ಬಂದಿ ಸೇರಿ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಅಲ್ಲದೇ, ದಿವ್ಯಾರನ್ನು ಬಂಧಿಸಿ ಜೈಲಿಗೆ ಹಾಕಲಾಗಿತ್ತು. ಸುಮಾರು ಏಳು ವರ್ಷಗಳ ನಂತರ ಎಂದರೆ, 2023ರ ಜೂನ್ನಲ್ಲಿ ಬಾಂಬೆ ಹೈಕೋರ್ಟ್ ದಿವ್ಯಾ ಅವರಿಗೆ ಜಾಮೀನು ನೀಡಿತ್ತು.
ಇದನ್ನೂ ಓದಿ: ಜಾಮೀನಿನ ಮೇಲೆ ಹೊರಬಂದಿದ್ದ ಮಾಜಿ ಮಾಡೆಲ್ ದಿವ್ಯಾ ಕೊಲೆ: ಆರೋಪಿಗಳು ಅರೆಸ್ಟ್