ವಾರಣಾಸಿ(ಉತ್ತರ ಪ್ರದೇಶ): ಒಂದೇ ಕುಟುಂಬದ ನಾಲ್ವರ ಮೃತದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಇಂದು ಬೆಳಕಿಗೆ ಬಂದಿದೆ. ಇಲ್ಲಿನ ದಶಾಶ್ವಮೇಧ ಪೊಲೀಸ್ ಠಾಣಾ ವ್ಯಾಪ್ತಿಯ ದೇವನಾಥಪುರ ಪ್ರದೇಶದ ಧರ್ಮಶಾಲಾ ಕೊಠಡಿಯಲ್ಲಿ ಈ ಶವಗಳು ಸಿಕ್ಕಿವೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.
ಪ್ರಾಥಮಿಕ ಮಾಹಿತಿ ಪ್ರಕಾರ, ಮೃತರನ್ನು ಆಂಧ್ರಪ್ರದೇಶದ ಕೊಂಡಬಾಬು (50), ಲಾವಣ್ಯ (45), ರಾಜೇಶ್ (25) ಮತ್ತು ಜಯರಾಜ್ (23) ಎಂದು ಗುರುತಿಸಲಾಗಿದೆ. ಇವರು ಪೂರ್ವ ಗೋದಾವರಿ ಜಿಲ್ಲೆಯವರು ಎನ್ನಲಾಗಿದೆ. ಡಿಸೆಂಬರ್ 3ರಂದು ಇವರು ಕಾಶಿಗೆ ಬಂದಿದ್ದು, ಧರ್ಮಶಾಲಾ ಕೊಠಡಿಯಲ್ಲಿ ಉಳಿದುಕೊಂಡಿದ್ದರು. ಇಂದು ಇಲ್ಲಿಂದ ಹೊರಡಬೇಕಿತ್ತು. ಆದರೆ, 5 ಗಂಟೆಯಾದರೂ ಕೊಠಡಿಯಿಂದ ಯಾರೂ ಹೊರಗೆ ಬಂದಿಲ್ಲ. ಇದರಿಂದ ಅನುಮಾನಗೊಂಡ ಸಿಬ್ಬಂದಿಯೊಬ್ಬರು ಬಾಗಿಲು ತಟ್ಟಿದ್ದಾರೆ. ಕೊಠಡಿ ಒಳಗಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಿಟಕಿ ಮೂಲಕ ಒಳಗೆ ಇಣುಕಿ ನೋಡಿದಾಗ ನಾಲ್ವರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ಕಾಶಿ ವಲಯದ ಡಿಸಿಪಿ ಆರ್.ಎಸ್.ಗೌತಮ್ ಮಾತನಾಡಿ, ''ದಶಾಶ್ವಮೇಧ ಪ್ರದೇಶದಲ್ಲಿ ಕೈಲಾಸ ಭವನದ ಕೊಠಡಿ ಸಂಖ್ಯೆ ಎಸ್-6ರಲ್ಲಿ ನಾಲ್ವರ ಶವಗಳು ದೊರೆತಿವೆ. ಕಳೆದ 3ನೇ ತಾರೀಖಿನಂದು ರಾಜೇಶ್ ತನ್ನ ಆಧಾರ್ ಕಾರ್ಡ್ ಮೇಲೆ ಎಲ್ಲರಿಗೂ ಕೊಠಡಿಗಳನ್ನು ಬುಕ್ ಮಾಡಿದ್ದರು. ಇಲ್ಲಿಂದ ಇವರು ಗುರುವಾರ ಬೆಳಿಗ್ಗೆ 11 ಗಂಟೆಗೆ ಕಾಶಿಯಿಂದ ಹೊರಡಬೇಕಿತ್ತು. ಸಂಜೆಯವರೆಗೂ ಅವರ ಕೊಠಡಿ ಒಳಗಿನಿಂದ ಲಾಕ್ ಆಗಿತ್ತು. ಇದು ಆತ್ಮಹತ್ಯೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ'' ಎಂದರು.
''ವಿಧಿವಿಜ್ಞಾನ ತಂಡದೊಂದಿಗೆ ಶ್ವಾನದಳ ಸ್ಥಳ ಪರಿಶೀಲನೆ ನಡೆಸಿದೆ. ಮೃತರ ಕುಟುಂಬಗಳನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ. ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಯಾರಾದರೂ ಕೊಲೆ ಮಾಡಿ ನಂತರ ನೇಣು ಹಾಕಿದ್ದಾರೋ ಎಂದು ತಿಳಿಯಲು ಹಚ್ಚಿನ ತನಿಖೆ ನಡೆಯುತ್ತಿದೆ'' ಎಂದು ತಿಳಿಸಿದರು.
ಇದನ್ನೂ ಓದಿ: ಕಲಬುರಗಿ: ಎಸಿಸಿ ಸಿಮೆಂಟ್ ಕಾರ್ಖಾನೆ ಡೆಪ್ಯುಟಿ ಮ್ಯಾನೇಜರ್ ಆತ್ಮಹತ್ಯೆ