ನೆಲ್ಲೂರು, ಆಂಧ್ರಪ್ರದೇಶ: ದೋಣಿಯಲ್ಲಿ ವಿಹಾರಕ್ಕೆ ಹೋದ ಗೆಳೆಯರ ಮೋಜು ಮಸ್ತಿಗೆ ಜೀವ ತೆಗೆದಿದೆ. ಕೊಳದ ಮಧ್ಯ ಪ್ರವೇಶಿಸಿದ ಬಳಿಕ ನಿಯಂತ್ರಣ ತಪ್ಪಿ ಬೋಟ್ ಪಲ್ಟಿಯಾಗಿದ್ದು, ಈ ಅವಘಡದಲ್ಲಿ ಆರು ಯುವಕರು ನಾಪತ್ತೆಯಾಗಿದ್ದರು. ಬಳಿಕ ಇಬ್ಬರ ದೇಹ ಪತ್ತೆಯಾಗಿದ್ದು, ನಾಲ್ವರು ಸುರಕ್ಷಿತವಾಗಿ ದಡ ತಲುಪಿರುವುದು ಬೆಳಕಿಗೆ ಬಂದಿದೆ.
ಪೊಲೀಸರು ಮತ್ತು ಸ್ಥಳೀಯರ ಪ್ರಕಾರ, ಶ್ರೀ ಪೊಟ್ಟಿ ಶ್ರೀರಾಮುಲು ನೆಲ್ಲೂರು ಜಿಲ್ಲೆಯ ಪೊದಲಕೂರು ತಾಲೂಕಿನ ತೊಡೇರು ಎಂಬಲ್ಲಿನ ಹತ್ತು ಯುವಕರು ಭಾನುವಾರ ಸಂಜೆ ಮೋಜು ಮಾಡಲು ಗ್ರಾಮದ ರತ್ನಗಿರಿ ಹೊಂಡಕ್ಕೆ ಹೋಗಿದ್ದರು. ಸಂಜೆ 5.30ಕ್ಕೆ ಕೊಳದ ಬಳಿ ಮೀನುಗಳಿಗೆ ಆಹಾರ ನೀಡುವುದಕ್ಕಾಗಿ ದೋಣಿಯಲ್ಲಿ ವಿಹಾರಕ್ಕೆ ತೆರಳಿದ್ದರು. ಮಧ್ಯಕ್ಕೆ ಹೋದ ತಕ್ಷಣ ನಿಯಂತ್ರಣ ತಪ್ಪಿ ಬೋಟ್ ಪಲ್ಟಿಯಾಗಿದೆ. ವಿಷ್ಣು, ಕಿರಣ್, ಒಂಟೆರು ಮಹೇಂದ್ರ, ಮಹೇಶ್ ಸ್ವಲ್ಪ ದೂರ ಈಜಿ ಮರಗಳನ್ನು ಹಿಡಿದುಕೊಂಡು ಸಹಾಯಕ್ಕೆ ಜೋರಾಗಿ ಕೂಗಿದ್ದಾರೆ. ಇದನ್ನು ಕೇಳಿದ ಸ್ಥಳೀಯರು ಅವರನ್ನು ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ.
ಬಾಲಾಜಿ, ಮಣ್ಣೂರು ಕಲ್ಯಾಣ್, ಬಟ್ಟ ರಘು, ಚಲ್ಲ ಪ್ರಶಾಂತ್, ಅಲ್ಲಿ ಶ್ರೀನಾಥ್ ಮತ್ತು ಪಿ.ಸುರೇಂದ್ರ ನೀರುಪಾಲಾಗಿದ್ದು, ಅವರ ದೇಹಗಳು ಇನ್ನು ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕಾಗಮಿಸಿದ ಕುಟುಂಬಸ್ಥರು ಕೆರೆಯ ಎಲ್ಲ ಕಡೆಯಿಂದ ತಮ್ಮ ಪ್ರೀತಿಪಾತ್ರರನ್ನು ಹುಡುಕುತ್ತಿದ್ದಾರೆ. ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ಕೈಗೊಂಡಿದ್ದರು. ನೆಲ್ಲೂರು ಜಿಲ್ಲಾಧಿಕಾರಿ ಚಕ್ರಧರ್ ಬಾಬು ಅವರು ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ನಡೆಸಿದರು. ಭಾನುವಾರ ರಾತ್ರಿಯಿಂದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮಧ್ಯರಾತ್ರಿಯವರೆಗೆ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಇಂದು ಬೆಳಗ್ಗೆಯಿಂದಲೇ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದ ರಕ್ಷಣಾ ಕಾರ್ಯ ಮುಂದುವರಿಸಿದ್ದರು.
ಎಸ್ಪಿ ಸಿ.ಎಚ್.ವಿಜಯರಾವ್, ಆರ್ಡಿಒ ಮಲೋಲ, ಸ್ಥಳೀಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಚಿವ ಕಾಕಣಿ ಗೋವರ್ಧನ್ ರೆಡ್ಡಿ ಅವರ ಹುಟ್ಟೂರು ಗ್ರಾಮವಾದ್ದರಿಂದ ಕೇರಳ ಪ್ರವಾಸದಲ್ಲಿರುವ ಅವರು ಇಂದು ಘಟನಾ ಸ್ಥಳಕ್ಕೆ ತಲುಪಲಿದ್ದಾರೆ. ಇದರೊಂದಿಗೆ ನಾಪತ್ತೆಯಾದವರ ಶೋಧ ಕಾರ್ಯ ಮುಂದುವರಿಸಲು ನಿರ್ಧರಿಸಲಾಗಿದೆ. ಕೃಷ್ಣಪಟ್ಟಣಂ ಬಂದರಿನಿಂದ ದೋಣಿ ಮತ್ತು 8 ಈಜುಗಾರರನ್ನು ಕರೆತರಲಾಗಿತ್ತು.
ಇಬ್ಬರ ಮೃತದೇಹಗಳು ಪತ್ತೆ: ಇಂದು ಬೆಳಗ್ಗೆಯಿಂದಲೇ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಇಬ್ಬರು ಯುವಕರ ಮೃತದೇಹಗಳು ಪತ್ತೆಯಾಗಿವೆ. ಮೃತರು ಮಣ್ಣೂರು ಕಲ್ಯಾಣ್ (30) ಮತ್ತು ಅಲ್ಲಿ ಶ್ರೀನಾಥ್ (16) ಎಂದು ಗುರುತಿಸಲಾಗಿದೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ತಮ್ಮವರನ್ನು ಕಳೆದುಕೊಂಡ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಆಯಾ ಯುವಕರ ಕುಟುಂಬಸ್ಥರು ನಮ್ಮ ಮಗ ಬುದುಕಿರಬಹುದೆಂದು ಸಣ್ಣ ನಂಬಿಕೆಯ ಮೇಲೆ ಸ್ಥಳದಲ್ಲಿ ಕಾಯುತ್ತಿದ್ದಾರೆ.
ಓದಿ: ಚುನಾವಣಾ ಕರ್ತವ್ಯಕ್ಕೆ ಹೊರಟಿದ್ದ ಮತಗಟ್ಟೆ ಅಧಿಕಾರಿ ಅಪಘಾತದಲ್ಲಿ ಸಾವು