ಜೈಪುರ: ರಾಜಸ್ಥಾನದ ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನು ಆಯ್ಕೆ ಮಾಡುವ ಪ್ರಮುಖ ಪರೀಕ್ಷೆ (REET)ಯಲ್ಲಿ ನಕಲು ಮಾಡಲು ಯತ್ನಿಸಿದ ಐವರನ್ನು ಬಂಧಿಸಲಾಗಿದೆ. ಅಭ್ಯರ್ಥಿಗಳು ತಾವು ಧರಿಸಿದ್ದ ಚಪ್ಪಲಿಗಳಲ್ಲಿ ಬ್ಲೂಟೂತ್ ಸಾಧನಗಳನ್ನು ಅಳವಡಿಸಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಸ್ಥಾನದಲ್ಲಿ ನಿನ್ನೆ( ಭಾನುವಾರ) ಶಿಕ್ಷಕ ವೃತ್ತಿಗೆ ಅರ್ಹತೆ ಪಡೆಯುವ (REET) ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಭದ್ರತೆಯನ್ನೂ ಒದಗಿಸಲಾಗಿತ್ತು. ಆದರೆ, ಭದ್ರತೆಗೂ ಸೆಡ್ಡು ಹೊಡೆದು ಬ್ಲೂಟೂತ್ ಸಾಧನಗಳನ್ನು ಕೊಂಡೊಯ್ದ ಅಭ್ಯರ್ಥಿಗಳು ಇದೀಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಚಪ್ಪಲಿಯೊಳಗೆ ಬ್ಲೂಟೂತ್ ಸಾಧನ ಅಳವಡಿಸಿಕೊಂಡಿದ್ದ ಅಭ್ಯರ್ಥಿ ಕಿವಿಯೊಳಗೂ ಒಂದು ಸಾಧನವನ್ನು ಸಿಕ್ಕಿಸಿಕೊಂಡಿದ್ದ. ಅಲ್ಲದೆ, ಪರೀಕ್ಷಾ ಹಾಲ್ನಲ್ಲಿದ್ದ ಆತನಿಗೆ ಹೊರಗಿನಿಂದ ಯಾರೋ ಸಹಾಯ ಮಾಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ರತನ್ ಲಾಲ್ ಭಾರ್ಗವ್ ತಿಳಿಸಿದ್ದಾರೆ.
ರೀಟ್‌ನಲ್ಲಿ ಮೋಸವಾಗುವುದನ್ನು ತಡೆಯಲು ರಾಜಸ್ಥಾನದ ಹಲವು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಎಸ್‌ಎಂಎಸ್ ಅನ್ನು 12 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಲು ಅಭ್ಯರ್ಥಿ ಕಡ್ಡಾಯವಾಗಿ (REET) ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೋವಿಡ್-19 ಸಾಂಕ್ರಾಮಿಕದ ಮಧ್ಯೆಯೂ ಸುರಕ್ಷತೆ ಮತ್ತು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿತ್ತು.
ಇದನ್ನೂ ಓದಿ: Video: ಹೈದರಾಬಾದ್ನಲ್ಲಿ ಧಾರಾಕಾರ ಮಳೆ... ನೋಡ ನೋಡ್ತಾನೆ ಕೊಚ್ಚಿಹೋದ ಸಾಫ್ಟವೇರ್ ಇಂಜಿನೀಯರ್