ಕೋಲ್ಕತ್ತಾ: ಮುಂದಿನ ವರ್ಷ ನಡೆಯಲಿರುವ 2021ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 200 ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬರುವುದು ಬಿಜೆಪಿಯ ಸದ್ಯದ ಪ್ಲಾನ್. ಈ ಪ್ಲಾನ್ ವರ್ಕೌಟ್ ಮಾಡಲು ಅಮಿತ್ ಶಾ ಇನ್ನಿಲ್ಲದ ಕಸರತ್ತನ್ನು ಸದ್ದಿಲ್ಲದೇ ಮಾಡುತ್ತಿದ್ದಾರೆ.
ಅಮಿತ್ ಶಾ ಅವರು ಚುನಾವಣೆ ಗೆಲ್ಲಲು ಗುಪ್ತಗಾಮಿನಿಯಂತೆ ರಣತಂತ್ರ ಹೆಣೆಯುತ್ತಿದ್ದಾರೆ. ಅಲ್ಲದೇ ಫಾರ್ಮುಲಾ 23 ಅನ್ನು ರಚನೆ ಮಾಡಿದ್ದಾರೆ. ಜತೆಗೆ ಮಿಷನ್ 200 ಕೂಡಾ ಇದೆ. ಇದಕ್ಕಾಗಿ ಅವರು ಕಾರ್ಯಕರ್ತರ ಮೇಲೆ ಬೆಳಕು ಚೆಲ್ಲಿದ್ದಾರೆ. ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ನಮೋ ಆ್ಯಪ್ ಡೌನ್ಲೋಡ್ ಮಾಡುವಂತೆ ಬೆಂಬಲಿಗರಲ್ಲಿ ಅರಿವು ಮೂಡಿಸಿ ಜನರಿಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರಿಗೆ ನೀಡಿದ್ದಾರೆ.
ಈ ಸಂಬಂಧ ಮಂಡಲ್ ಮಟ್ಟದ ಹಾಗೂ ಬೂತ್ ಮಟ್ಟದ ಕಾರ್ಯಕರ್ತರ ಪಡೆ ಕಟ್ಟಲಾಗುತ್ತಿದೆ. ಇದಕ್ಕಾಗಿ A, B, C ಮತ್ತು D ಗ್ರೂಪ್ಗಳನ್ನು ರಚನೆ ಮಾಡಲಾಗಿದ್ದು ಪಕ್ಷದ ಕಾರ್ಯಕರ್ತರು ಕೆಟಗರಿ ಡಿ ಮೇಲೆ ತಮ್ಮ ಗಮನ ಕೇಂದ್ರೀಕರಿಸಬೇಕಿದೆ. ಇನ್ನು ಪದಾಧಿಕಾರಿಗಳು ಕೆಟಗರಿ ಸಿ ಮೇಲೆ ಕೆಲಸ ಮಾಡಬೇಕಿದೆ. ಬೂತ್ ಮಟ್ಟದ ಸದಸ್ಯರ ಫೋನ್ ನಂಬರ್ಗಳನ್ನು ಪಕ್ಷದ ರಾಜ್ಯ ಘಟಕದ ಪ್ರಧಾನ ಕಚೇರಿಗೆ ನಿಯಮಿತವಾಗಿ ಮುಟ್ಟಿಸಬೇಕಿದೆ.
ಬೂತ್ ಮಟ್ಟದ ಸಂಘಟನೆ ಕಡ್ಡಾಯವಾಗಿ 6 ಕಾರ್ಯಕ್ರಮಗಳನ್ನು ಮಾಡಬೇಕಿದೆ. ಪಿಎಂ ಮನ್ ಕಿ ಬಾತ್ ಕಾರ್ಯಕ್ರಮವನ್ನು ಕಾರ್ಯಕರ್ತರು, ಸದಸ್ಯರು ಕೇಳುವುದು ಕಡ್ಡಾಯ ಮಾಡಲಾಗಿದೆ. ಇನ್ನು ಕೆಳಮಟ್ಟದಲ್ಲಿ ಪಕ್ಷದ ಸದಸ್ಯರ ಲಿಸ್ಟ್ ಸ್ಮಾರ್ಟ್ ಫೋನ್ಗಳಲ್ಲಿ ಫೀಡ್ ಮಾಡಲೇಬೇಕಿದೆ.
ಪಕ್ಷದ ಸದಸ್ಯತ್ವ ಅಭಿಯಾನ ನಿರಂತವಾಗಿಡುವಂತೆ ಪಕ್ಷದ ಎಲ್ಲರಿಗೂ ನಿರ್ದೇಶನ ನೀಡಲಾಗಿದೆ. ಎಲ್ಲ ಕಾರ್ಯಕರ್ತರು, ಪದಾಧಿಕಾರಿಗಳು ಆರ್ಎಸ್ಎಸ್ನ ಸ್ವಯಂ ಸೇವಕರೊಂದಿಗೆ ಸಂಪರ್ಕದಲ್ಲಿರುವಂತೆ ನೋಡಿಕೊಳ್ಳಲು ತಿಳಿಸಲಾಗಿದೆ. ಎನ್ಜಿಒಗಳೊಂದಿಗೆ ಸ್ವಯಂ ಸೇವಕರು ಹಾಗೂ ನರೇಂದ್ರ ಮೋದಿ ಸರ್ಕಾರದಿಂದ ಸಹಾಯ ಪಡೆದ ಫಲಾನುಭವಿಗಳು ಸಂಪರ್ಕದಲ್ಲಿರುವಂತೆ ನೋಡಿಕೊಳ್ಳುವ ಟಾಸ್ಕ್ ನೀಡಲಾಗಿದೆ. ಬೂತ್ ಮಟ್ಟದ ಏರಿಯಾಗಳಲ್ಲಿ ಕನಿಷ್ಠ ಐದು ಕಡೆ ಪಕ್ಷದ ನಾಮಫಲಕ ಹಾಗೂ ಚಿಹ್ನೆ ಬಹಿರಂಗವಾಗಿ ಕಾಣುವಂತೆ ಅಳವಡಿಸಲು ಸೂಚನೆ ಸಹ ನೀಡಲಾಗಿದೆ.