ದೀನ್‌ಹಟಾ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ಕಿಡಿಗೇಡಿಗಳ ಅಟ್ಟಹಾಸ ಮುಂದುವರಿದಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಡುವಿನ ರಾಜಕೀಯ ಕೆಸರೆರಚಾಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ನಡುವೆ ಟಿಎಂಸಿ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮನೆಗಳನ್ನು ದ್ವಂಸ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿಸಿತ್ ಪ್ರಮಾಣಿಕ್ ಅವರ ಬೆಂಗಾವಲು ವಾಹನದ ಮೇಲೆ ಶನಿವಾರ ಟಿಎಂಸಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ ಬಳಿಕ, ಬಿಜೆಪಿ ಕಾರ್ಯಕರ್ತರ ಮನೆಗಳನ್ನು ಧ್ವಂಸಗೊಳಿಸಿ ಹಿಂಸಾಚಾರ ನಡೆಸಿರುವ ಆರೋಪ ಪ್ರಕರಣ ಭಾನುವಾರ ಕೂಚ್ ಬೆಹಾರ್ ಜಿಲ್ಲೆಯ ದೀನ್‌ಹಟಾನ ಹಲವು ಭಾಗಗಳಲ್ಲಿ ನಡೆದಿದೆ. ಶನಿವಾರ ರಾತ್ರಿ ಬೋರ್ಡಿಂಗ್ ಪಾರಾ ಪ್ರದೇಶದಲ್ಲಿ ಬಿಜೆಪಿಯ ದೀನ್‌ಹಟಾ ನಗರ ಮಂಡಲ ಕಾರ್ಯದರ್ಶಿ ಮುನ್ನಾ ಸಾವಾ ಅವರ ಮನೆಯ ಮುಂದೆ ಗುಂಪೊಂದು ಗಲಾಟೆ ಮಾಡುತ್ತಿರುವುದು ಕಂಡುಬಂದಿದೆ. ಘಟನೆಯಲ್ಲಿ ಸ್ಥಳೀಯ ಟಿಎಂಸಿ ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಬಿಜೆಪಿ ಕಾರ್ಯಕರ್ತರು ಇದನ್ನು ವಿರೋಧಿಸಲು ರಸ್ತೆಗಿಳಿಯಬೇಕಾಗುತ್ತದೆ: ಈ ಕುರಿತು ಬಿಜೆಪಿಯ ಕೂಚ್ ಬೆಹಾರ್ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಸುಕುಮಾರ್ ರಾಯ್ ಮಾತನಾಡಿ, ನಿಸಿತ್ ಪ್ರಾಮಾಣಿಕ್ ಮೇಲಿನ ದಾಳಿಯ ನಂತರ, ದೀನ್‌ಹಟಾನ ಬಿಜೆಪಿ ಕಾರ್ಯಕರ್ತರ ಮನೆಗಳನ್ನು ಧ್ವಂಸಗೊಳಿಸಲಾಗುತ್ತಿದೆ. ಅನೇಕ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಇದೇ ರೀತಿ ಮುಂದುವರಿದರೆ ಬಿಜೆಪಿ ಕಾರ್ಯಕರ್ತರು ಇದನ್ನು ವಿರೋಧಿಸಲು ರಸ್ತೆಗಿಳಿಯಬೇಕಾಗುತ್ತದೆ. ನಂತರ ಟಿಎಂಸಿ ಕಾಣಸಿಗುವುದಿಲ್ಲ ಎಂದು ಎಚ್ಚರಿಕೆ ರವಾನಿಸಿದ್ದಾರೆ. ಅವರ ಈ ಹೇಳಿಕೆಗೆ ಟಿಎಂಸಿ ನಾಯಕರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಅದೇ ರೀತಿ, ದೀನ್‌ಹಟಾ -2 ಬ್ಲಾಕ್‌ನ ಬಮನ್‌ಹತ್ ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಮಟಿ ಪ್ರದೇಶದಲ್ಲಿ ಮಂಡಲ ಸಂಖ್ಯೆ 26 ರ ಉಪಾಧ್ಯಕ್ಷ ಕೃಷ್ಣಕಾಂತ್ ಬರ್ಮನ್ ಅವರ ಮನೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಲಾಗಿದೆ ಎಂದು ಆರೋಪಿಸಲಾಗಿದೆ. ಅಕ್ಕಪಕ್ಕದ ಪ್ರದೇಶಗಳಲ್ಲಿನ ತಮ್ಮ ಪಕ್ಷದ ಅನೇಕ ಕಚೇರಿಗಳನ್ನು ಸಹ ಧ್ವಂಸಗೊಳಿಸಲಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ದೂರಿದ್ದಾರೆ.
ಟಿಎಂಸಿ ಕಾರ್ಯಕರ್ತರು ತಮ್ಮ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ: ಶನಿವಾರ ದೀನ್‌ಹಟಾದಲ್ಲಿ ಗಾಯಗೊಂಡ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಲು ತೆರಳುತ್ತಿದ್ದ ಕೇಂದ್ರ ಸಚಿವರನ್ನು ಟಿಎಂಸಿ ಕಾರ್ಯಕರ್ತರು ಕಪ್ಪು ಬಾವುಟಗಳೊಂದಿಗೆ ತಡೆಯಲು ಯತ್ನಿಸಿದ್ದರು. ಟಿಎಂಸಿ ಕಾರ್ಯಕರ್ತರು ತಮ್ಮ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಮತ್ತು ಬಾಂಬ್ಗಳನ್ನು ಎಸೆದಿದ್ದಾರೆ ಎಂದು ಪ್ರಮಾಣಿಕ್ ಆರೋಪಿಸಿದ್ದಾರೆ.
ಘಟನೆಯಲ್ಲಿ ಅವರ ಕಾರಿನ ಗಾಜಿನ ಕಿಟಕಿಗೆ ಹಾನಿಯಾಗಿದೆ. ಘಟನೆಯ ನಂತರ ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ದಾವಿಸಿದ್ದಾರೆ ನಂತರ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದ್ದು, ಈ ವೇಳೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸದ್ಯ ಈ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಮುಂದುವರೆದಿದೆ.
ಇದನ್ನೂ ಓದಿ: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಪ್ರಮಾಣಿಕ್ ಕಾರಿನ ಮೇಲೆ ದಾಳಿ