ಇಂಫಾಲ್(ಮಣಿಪುರ): ಮಣಿಪುರದ 22 ಕ್ಷೇತ್ರಗಳಿಗೆ ಇಂದು ಎರಡನೇ ಹಂತದ ಮತದಾನವಾಗಿದ್ದು, ಈ ವೇಳೆ ಹಿಂಸಾಚಾರ ನಡೆದಿರುವ ಬಗ್ಗೆ ವರದಿಯಾಗಿದೆ. ಪರಿಣಾಮ ಓರ್ವ ಬಿಜೆಪಿ ಕಾರ್ಯಕರ್ತ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಮಣಿಪುರದ ಸೇನಾಪತಿ ಜಿಲ್ಲೆಯ ಕರೋಂಗ್ ಕ್ಷೇತ್ರದ 47/49 ಸಂಖ್ಯೆಯ ಮತಗಟ್ಟೆ ಕೇಂದ್ರದ ಬಳಿ ಕಾಂಗ್ರೆಸ್ ಕಾರ್ಯಕರ್ತನೋರ್ವ ಗುಂಡಿನ ದಾಳಿ ನಡೆಸಿ ಬಿಜೆಪಿ ಕಾರ್ಯಕರ್ತನನ್ನ ಕೊಲೆ ಮಾಡಿದ್ದಾನೆ. ಮೃತನನ್ನ 25 ವರ್ಷದ ಎಲ್ ಅಮುಬಾ ಸಿಂಗ್ ಎಂದು ಗುರುತಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತನನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮತದಾನ ನಡೆಯುತ್ತಿದ್ದ ವೇಳೆ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದ ಕಾರಣ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮತ್ತೊಂದು ಘಟನೆ ತೌಲಬ್ನಲ್ಲಿ ನಡೆದಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಇದನ್ನೂ ಓದಿರಿ: ಮಣಿಪುರದ ಉಚ್ಛಾಟಿತ ಬಿಜೆಪಿ ನಾಯಕನ ನಿವಾಸದೆದುರು ಸ್ಫೋಟ.. ಮುಂದುವರಿದ 2ನೇ ಹಂತದ ಮತದಾನ
ಉಚ್ಛಾಟಿತ ಬಿಜೆಪಿ ನಾಯಕನ ನಿವಾಸದೆದುರು ಬಾಂಬ್ ಸ್ಫೋಟ: ಮಣಿಪುರದ ಇಂಪಾಲ್ನ ಬಿಜೆಪಿ ಉಚ್ಛಾಟಿತ ನಾಯಕ ಚೋಂಗ್ಥಮ್ ಬಿಜೋಯ್ ಅವರ ನಿವಾಸದ ಎದುರು ನಿನ್ನೆ ರಾತ್ರಿ ದುಷ್ಕರ್ಮಿಗಳು ಕಚ್ಚಾ ಬಾಂಬ್ ಎಸೆದಿದ್ದಾರೆ. ಆದರೆ, ಯಾವುದೇ ರೀತಿಯ ಸಾವು-ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.
ಮಣಿಪುರದಲ್ಲಿಂದು ಬೆಳಗ್ಗೆ 7 ಗಂಟೆಯಿಂದ 10 ಜಿಲ್ಲೆಗಳ 22 ಕ್ಷೇತ್ರಗಳಲ್ಲಿ ಮತದಾನವಾಗ್ತಿದ್ದು, 92 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಲ್ಲಿಯವರೆಗಿನ ಮಾಹಿತಿ ಪ್ರಕಾರ ಶೇ. 68ರಷ್ಟು ಮತದಾನವಾಗಿದೆ ಎಂದು ವರದಿಯಾಗಿದೆ.