ಅಗರ್ತಲಾ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುರಿತು ಅವಹೇಳನಾಕಾರಿ ಹೇಳಿಕೆ ನೀಡುವ ಮೂಲಕ ಪಶ್ಚಿಮ ಬಂಗಾಳದ ಸಚಿವ ಅಖಿಲ್ ಗಿರಿ, ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಇದೀಗ ಅವರ ಹೇಳಿಕೆಯನ್ನು ಖಂಡಿಸಿ ತ್ರಿಪುರಾದಲ್ಲಿ ಭಾರತೀಯ ಜನತಾ ಜನಜಾತಿ ಮೋರ್ಚಾ (ಬಿಜೆಜೆಎಂ), ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಸಚಿವ ಅಖಿಲ್ ಗಿರಿ ಅವರ ಪ್ರತಿಕೃತಿ ದಹಿಸಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನ ಕಾರ್ಯದರ್ಶಿ ದೇವಿದ್ ದೆಬ್ಬರ್ಮಾ, ಶನಿವಾರ ನಂದಿಗ್ರಾಮದಲ್ಲಿ ಸಚಿವ ಅಖಿಲ್ ಗಿರಿ ಅವರು ಭಾರತದ ರಾಷ್ಟ್ರಪತಿಗಳ ಬಗ್ಗೆ ಜನಾಂಗೀಯ ಹೇಳಿಕೆ ನೀಡಿದ್ದಾರೆ. ಇದು ರಾಷ್ಟ್ರಾದ್ಯಂತ ಬುಡಕಟ್ಟು ಜನಾಂಗದವರ ಭಾವನೆಗಳನ್ನು ಘಾಸಿಗೊಳಿಸಿದೆ. ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) ಇದರ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಸಿಎಂ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಬೇಕು ಎಂದು ತ್ರಿಪುರಾ ಬಿಜೆಪಿ ಜನಜಾತಿ ಮೋರ್ಚಾ ಒತ್ತಾಯಿಸುತ್ತದೆ ಎಂದು ಹೇಳಿದರು.
ಏನಿದು ಘಟನೆ?: ಸಚಿವ ಅಖಿಲ್ ಗಿರಿ ಗುರುವಾರ ನಂದಿಗ್ರಾಮದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ಈ ವೇಳೆ ಅವರು (ಬಿಜೆಪಿ) ನನ್ನನ್ನು ಚೆನ್ನಾಗಿ ಕಾಣುತ್ತಿಲ್ಲವೆಂದು ಟೀಕಿಸಿದ್ದಾರೆ. ಯಾರನ್ನೇ ಆಗಲಿ ಅವರ ಬಾಹ್ಯ ನೋಟದಿಂದ ತೀರ್ಮಾನಿಸಬಾರದು. ನಾವು ರಾಷ್ಟ್ರಪತಿಗಳ ಹುದ್ದೆಯನ್ನು ಗೌರವಿಸುತ್ತೇವೆ. ಆದರೆ ಅವರು ಹೇಗೆ ಕಾಣುತ್ತಾರೆ? ಎಂದು ಗಹಗಹಿಸಿ ನಗುತ್ತಾ ಹೇಳಿದ್ದರು. ಈ ಹೇಳಿಕೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ: ಬಿಹಾರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ರಾಜಕೀಯ ನಿಪುಣ ಪ್ರಶಾಂತ್ ಕಿಶೋರ್
ಈ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಸಚಿವರು ಕ್ಷಮೆ ಕೇಳಿದ್ದಾರೆ. ಪಶ್ಚಿಮ ಬಂಗಾಳದ ಕರೆಕ್ಷನಲ್ ಹೋಮ್ಸ್ ಖಾತೆ ಸಚಿವರಾಗಿರುವ ಅಖಿಲ್ ಗಿರಿ ಅವರ ಹೇಳಿಕೆ ಬೇಜವಾಬ್ದಾರಿಯುತವಾಗಿ ಕೂಡಿದೆ ಎಂದಿರುವ ಟಿಎಂಸಿ, ಅದರಿಂದ ಅಂತರ ಕಾಯ್ದುಕೊಂಡಿದೆ.