ನವದೆಹಲಿ: ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ತನ್ನ 160 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಕ್ರಿಕೆಟರ್ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಅವರಿಗೂ ಟಿಕೆಟ್ ನೀಡಿದ್ದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ರಿವಾಬಾ ಜಡೇಜಾ ಜಾಮ್‌ನಗರ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಸೆಪ್ಟೆಂಬರ್ 5, 1990 ರಂದು ಜನಿಸಿದ ರಿವಾಬಾ ಜಡೇಜಾ ಗುಜರಾತ್‌ನ ರಾಜ್‌ಕೋಟ್‌ನಲ್ಲಿರುವ ಆತ್ಮೀಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಸೈನ್ಸ್‌ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮಾಡಿದ್ದಾರೆ. ಅವರು 2019 ರಲ್ಲಿ ಬಿಜೆಪಿ ಸೇರಿದರು. ರಿವಾಬಾ ಮತ್ತು ರವೀಂದ್ರ ಜಡೇಜಾ ಏಪ್ರಿಲ್ 17, 2016 ರಂದು ವಿವಾಹವಾದರು.
ಕರ್ಣಿ ಸೇನೆಯ ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿದ್ದ ರಿವಾಬಾ 2019ರಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿಗೆ ಸೇರಿದ್ದರು. ಇದಕ್ಕೂ ಮುನ್ನ 2018 ರಲ್ಲಿ ರಿವಾಬಾ ಅವರು ಜಾಮ್‌ನಗರದಲ್ಲಿ ಪೊಲೀಸ್ ಪೇದೆಯೊಬ್ಬರಿಂದ ಹಲ್ಲೆಗೊಳಗಾದ ಪ್ರಕರಣದಲ್ಲಿ ಹೆಸರು ಮಾಡಿದ್ದರು.
ಜಾಮ್‌ನಗರ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ತವರೂರು ಎಂಬುದು ಗಮನಾರ್ಹ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಘಟ್ಲೋಡಿಯಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮಾಜಿ ನಾಯಕ ಹಾರ್ದಿಕ್ ಪಟೇಲ್ ಅವರು ವಿರಾಮಗಾಂ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಮಜುರಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವರಾದ ಮನ್ಸುಖ್ ಮಾಂಡವಿಯಾ, ಭೂಪೇಂದರ್ ಯಾದವ್ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥ ಸಿಆರ್ ಪಾಟೀಲ್ ಅವರು ಅಭ್ಯರ್ಥಿಗಳ ಹೆಸರನ್ನು ಘೋಷಿಸಿದರು.
ಗುಜರಾತ್ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಪಕ್ಷದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯು ಬುಧವಾರ ಪಕ್ಷದ ಪ್ರಧಾನ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದಿತ್ತು. ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಕೇಂದ್ರ ಸಚಿವ ಭೂಪೇಂದ್ರ ಯಾದವ್, ಕರ್ನಾಟಕದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಇತರರು ಭಾಗವಹಿಸಿದ್ದರು.
ಇದನ್ನೂ ಓದಿ: ಜಡೇಜಾ ಮುಂದೆ ಡ್ಯಾನ್ಸ್ ಮಾಡಿದ ಧವನ್.. ಮದುವೆಯಾದರೆ ಸರಿ ಹೋಗ್ತೀಯಾ ಎಂದ ಜಡ್ಡು