ಹೈದರಾಬಾದ್: ಕೋವಿಡ್ ಬಿಕ್ಕಟ್ಟಿನ ನಡುವೆ ರಾಜ್ಯದ ಐಎಎಸ್ ಅಧಿಕಾರಿಗಳಿಗೆ 32 ಐಷಾರಾಮಿ ಕಾರುಗಳನ್ನು ಖರೀದಿಸಿದ್ದಕ್ಕಾಗಿ ತೆಲಂಗಾಣ ಸರ್ಕಾರ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಮಲ್ಟಿ-ಯುಟಿಲಿಟಿ ಕಾರುಗಳು ನಿನ್ನೆ ಪ್ರಗತಿ ಭವನವನ್ನು ತಲುಪುತ್ತಿದ್ದಂತೆಯೇ ಸಿಎಂ ಕೆಸಿಆರ್ ಸರ್ಕಾರವನ್ನು ರಾಜ್ಯ ಬಿಜೆಪಿ ವಕ್ತಾರ ಕೆ.ಕೃಷ್ಣ ಸಾಗರ್ ರಾವ್ ತೀವ್ರವಾಗಿ ಟೀಕಿಸಿದ್ದಾರೆ.
'ಸಾರ್ವಜನಿಕ ಹಣ ವ್ಯರ್ಥ'
ಕಡಿಮೆ ಆದಾಯ ಮತ್ತು ಸಾಕಷ್ಟು ವೈದ್ಯಕೀಯ ಮೂಲಸೌಕರ್ಯಗಳ ಕೊರತೆಯಿಂದಾಗಿ ರಾಜ್ಯದ ಬೊಕ್ಕಸವು ದುಸ್ಥಿತಿಯಲ್ಲಿದೆ. ಪ್ರತಿ ಕಾರಿಗೆ 25 ಲಕ್ಷ ರೂ.ನಂತೆ 32 ಕಾರುಗಳ ಖರೀದಿಗೆ 11 ಕೋಟಿ ರೂ. ಖರ್ಚು ಮಾಡಲಾಗಿದೆ. ಇದನ್ನು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹೇಗೆ ಸಮರ್ಥಿಸಿಕೊಳ್ಳುತ್ತಾರೆ? ಸಾರ್ವಜನಿಕ ಹಣವನ್ನು ಸಿಎಂ ದೊಡ್ಡ ಪ್ರಮಾಣದಲ್ಲಿ ವ್ಯರ್ಥಮಾಡುತ್ತಿದ್ದಾರೆ. ಇದು ಸರ್ಕಾರದ ಭಯಾನಕ ಮತ್ತು ವಿವೇಚನೆಯಿಲ್ಲದ ನಿರ್ಧಾರ ಎಂದು ಕೃಷ್ಣ ಸಾಗರ್ ರಾವ್ ಆರೋಪಿಸಿದರು.
ಕೋವಿಡ್ ಲಾಕ್ಡೌನ್ನಿಂದಾಗಿ ಸರ್ಕಾರ ಆದಾಯ ಕಳೆದುಕೊಂಡಿರುವ ವೇಳೆ ಐಷಾರಾಮಿ ವಾಹನಗಳಿಗೆ ಕೋಟಿ ಕೋಟಿ ಹಣ ಸುರಿದಿದೆಯಲ್ಲಾ? ಹಾಗಾದರೆ ಹಣಕಾಸು ಸಚಿವರಿಗೆ ಕನಿಷ್ಠ ಪ್ರಜ್ಞೆಯೂ ಇಲ್ಲವೇ? ಇದೇ ಹಣವನ್ನು ಆಸ್ಪತ್ರೆಗಳಲ್ಲಿ ಹಾಸಿಗೆಗಳ ವ್ಯವಸ್ಥೆ ಮಾಡಲು, ಬಡವರಿಗೆ ಉಚಿತ ಚಿಕಿತ್ಸೆ ನೀಡಲು ಬಳಸಬಹುದು. ಹೀಗಾಗಿ ತಕ್ಷಣವೇ ಕಾರುಗಳನ್ನು ಹಿಂದಿರುಗಿಸಿ ಎಂದು ಬಿಜೆಪಿ ಆಗ್ರಹಿಸಿದೆ.
'ಬೇಜವಾಬ್ದಾರಿ ವೆಚ್ಚದ ಉತ್ತುಂಗ'
ಇನ್ನು ರಾಜ್ಯ ಕಾಂಗ್ರೆಸ್ ವಕ್ತಾರ ಶ್ರವಣ್ ದಾಸೋಜು, ಕೆಸಿಆರ್ ನೇತೃತ್ವದ ಟಿಆರ್ಎಸ್ ಸರ್ಕಾರವನ್ನು 'ಬೇಜವಾಬ್ದಾರಿ ವೆಚ್ಚದ ಉತ್ತುಂಗ' ಎಂದು ಕರೆದಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆ ಸಾಮರ್ಥ್ಯ ಹೆಚ್ಚಿಸಲು, ಸಾರ್ವಜನಿಕ ಸಾರಿಗೆಗಾಗಿ ಬಸ್ಸುಗಳನ್ನು ಖರೀದಿಸಲು ಸರ್ಕಾರದ ಬಳಿ ಹಣವಿಲ್ಲ. ಐಎಎಸ್ ಅಧಿಕಾರಿಗಳಿಗೆ ಉಡುಗೊರೆ ನೀಡಿ ಸಿಎಂ ಕೆಸಿಆರ್ ತಮ್ಮ ದುಷ್ಕೃತ್ಯಗಳಿಗೆ ಅವರನ್ನು ಮೂಕ ಪ್ರೇಕ್ಷಕರನ್ನಾಗಿಸಲು ಬಯಸುತ್ತಾರೆ ಎಂದು ಕಿಡಿ ಕಾರಿದ್ದಾರೆ.