ನವದೆಹಲಿ: ಮಣಿಪುರ, ತಮಿಳುನಾಡಿನಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ, ಬಿಹಾರದಲ್ಲಿ ನಿತೀಶ್ ಕುಮಾರ್ ವಿಧಾನಸಭೆ ಕಟ್ಟಡವನ್ನು ಉದ್ಘಾಟಿಸಿದ್ದರು. ಮಾಜಿ ಪಿಎಂ ಇಂದಿರಾ ಗಾಂಧಿ ಸಂಸತ್ ಭವನದ ಹೆಚ್ಚುವರಿ ಭವನ ಉದ್ಘಾಟಿಸಿದರೆ, ಅವರ ಉತ್ತರಾಧಿಕಾರಿಯಾಗಿದ್ದ ರಾಜೀವ್ ಗಾಂಧಿ 1987 ರಲ್ಲಿ ಸಂಸತ್ ಗ್ರಂಥಾಲಯ ಕಟ್ಟಡದ ಶಂಕುಸ್ಥಾಪನೆ ಮಾಡಿದ್ದರು. ಇದ್ಯಾವುದಕ್ಕೂ ರಾಷ್ಟ್ರಪತಿಗಳು ನೆನಪಾಗದ ಕಾಂಗ್ರೆಸ್ಗೆ, ಪ್ರಧಾನಿ ಮೋದಿ ಉದ್ಘಾಟಿಸಲಿರುವ ನೂತನ ಸಂಸತ್ ಭವನದ ವೇಳೆ ಎಚ್ಚರವಾಗಿದೆ ಎಂದು ಬಿಜೆಪಿ ಟೀಕಾಪ್ರಹಾರ ನಡೆಸಿದೆ.
ನೂತನ ಸಂಸತ್ ಭವನ ಉದ್ಘಾಟನೆ ವಿಚಾರದಲ್ಲಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಬೂಟಾಟಿಕೆ ನಡೆಸುತ್ತಿವೆ. ಪ್ರಧಾನಿ ಮೋದಿ ಅವರ ಮೇಲಿರುವ ಅಪರಿಮಿತ ದ್ವೇಷವೇ ವಿರೋಧಕ್ಕೆ ಕಾರಣ. ಸೋನಿಯಾ ಗಾಂಧಿ ಅವರು ವಿಧಾನಸಭೆ ಕಟ್ಟಡ ಉದ್ಘಾಟನೆ ಮಾಡಿದಾಗ ಅವರ ಸ್ಥಾನ ಏನಾಗಿತ್ತು ಎಂಬುದನ್ನು ಕಾಂಗ್ರೆಸ್ ವಿವರಿಸಬೇಕು ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ಸೇರಿದಂತೆ 21 ವಿಪಕ್ಷಗಳು ನೂತನ ಸಂಸತ್ ಭವನ ಉದ್ಘಾಟನೆಯನ್ನು ಬಹಿಷ್ಕರಿಸಿದ್ದಕ್ಕೆ ಉದಾಹರಣೆಗಳ ಸಮೇತ ಪ್ರಶ್ನಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಅವರು, ವಿರೋಧ ಪಕ್ಷಗಳು ಈ ನಿರ್ಧಾರ ತಳೆಯುವ ಮುನ್ನ ಹಿಂದಿನ ಘಟನೆಗಳನ್ನು ನೆನಪಿಸಿಕೊಳ್ಳಬೇಕು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಸಂಸತ್ ಭವನದ ಅನೆಕ್ಸ್(ಹೆಚ್ಚುವರಿ ಭವನ) ಅನ್ನು ಉದ್ಘಾಟಿಸಿದರು. ಅವರ ಉತ್ತರಾಧಿಕಾರಿ ರಾಜೀವ್ ಗಾಂಧಿ ಅವರು 1987 ರಲ್ಲಿ ಸಂಸತ್ತು ಗ್ರಂಥಾಲಯ ಕಟ್ಟಡದ ಶಂಕುಸ್ಥಾಪನೆ ಮಾಡಿದರು. ಆಗ ರಾಷ್ಟ್ರಪತಿಗಳನ್ನು ಯಾಕೆ ಕರೆಯಲಿಲ್ಲ ಎಂದು ಕೇಳಿದ್ದಾರೆ.
ಮಣಿಪುರ ಮತ್ತು ತಮಿಳುನಾಡಿನಲ್ಲಿ ವಿಧಾನಸಭೆ ಕಟ್ಟಡಗಳನ್ನು ಉದ್ಘಾಟನೆ ಮಾಡಿದ್ದು, ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ. ಸಿಂಗ್ ಅವರು ಪ್ರಧಾನಿಗಳಾಗಿದ್ದರು. ಆದರೆ, ಸೋನಿಯಾ ಅವರ ಹುದ್ದೆ ಏನಾಗಿತ್ತು. ಅವರಿಂದ ಯಾಕೆ ಉದ್ಘಾಟನೆ ಮಾಡಿಸಲಾಯಿತು ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು. ಮೋದಿಯವರನ್ನು ವಿರೋಧಿಸುವ ಕಾಂಗ್ರೆಸ್‌ನ ಬೂಟಾಟಿಕೆಗೆ ಮಿತಿಯಿಲ್ಲ ಎಂದು ಖಂಡಿಸಿದರು.
ಬಿಹಾರ ಮುಖ್ಯಮಂತ್ರಿಯಾದ ನಿತೀಶ್ ಕುಮಾರ್ ಅವರು ವಿಧಾನಸೌಧದ ಸೆಂಟ್ರಲ್ ಹಾಲ್ ಅನ್ನು ಉದ್ಘಾಟಿಸಿದ್ದಾರೆ. ಆಗ ಅವರೇಕೆ ರಾಷ್ಟ್ರಪತಿಗಳನ್ನು ಕರೆಸಲಿಲ್ಲ ಎಂದು ಪ್ರಶ್ನಿಸಿ ಪೂನಾವಾಲಾ ಟ್ವೀಟ್ ಮಾಡಿದ್ದಾರೆ. ಈ ಐದು ಕಾರ್ಯಕ್ರಮಗಳಲ್ಲಿ ರಾಷ್ಟ್ರಪತಿ, ರಾಜ್ಯಪಾಲರನ್ನು ಅವಮಾನಿಸಲಾಗಿದೆಯೇ? ಎಂಬುದನ್ನು ವಿಪಕ್ಷಗಳು ವಿವರಿಸಬೇಕು ಎಂದಿದ್ದಾರೆ.
ರಾಷ್ಟ್ರಪತಿಗೆ ಅವಮಾನಿಸಿದ್ದಾರು?: ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಣೆ ಮಾಡಿದಾಗ, ಚುನಾವಣೆಯ ವೇಳೆ ಅವರನ್ನೇ ಟೀಕೆ ಮಾಡಿದ್ದು ಕಾಂಗ್ರೆಸ್. ಅಲ್ಲದೇ, ಅವರ ವಿರುದ್ಧ ಎಲ್ಲ ವಿಪಕ್ಷಗಳು ಸೇರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದವು. ಪರಿಶಿಷ್ಟ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ಸಾಂವಿಧಾನಿಕ ರಾಷ್ಟ್ರಪತಿ ಹುದ್ದೆಯನ್ನು ವಹಿಸಿಕೊಂಡಾಗ, ಅವರನ್ನು "ರಾಷ್ಟ್ರಪತ್ನಿ" ಎಂದು ಜರಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವಮಾನಿಸಿದ್ದರು ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ತಿರುಗೇಟು ನೀಡಿದ್ದಾರೆ.
ಸರ್ಕಾರದ ಪ್ರತಿಯೊಂದು ಸಕಾರಾತ್ಮಕ ಕೆಲಸ ಮತ್ತು ಐತಿಹಾಸಿಕ ಕ್ಷಣಗಳ ವಿರುದ್ಧ ನಿಲ್ಲುವುದು ವಿರೋಧ ಪಕ್ಷಗಳ ಕೆಲಸವಾಗಿ ಮಾರ್ಪಟ್ಟಿದೆ. ಇದಕ್ಕೆ ಪ್ರಧಾನಿ ಮೋದಿ ಅವರ ಮೇಲಿರುವ ದ್ವೇಷವೊಂದೇ ಏಕೈಕ ಕಾರಣವಾಗಿದೆ ಎಂದು ಅವರು ಹೇಳಿದರು.
ವಿಪಕ್ಷಗಳ ವಾದವೇನು?: ನೂತನವಾಗಿ ನಿರ್ಮಿಸಲಾಗಿರುವ ಸಂಸತ್ ಭವನವನ್ನು ಇದೇ 28 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ದೇಶದ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿರುವ ಸಂಸತ್ತನ್ನು ಪ್ರಧಾನಿಗಳ ಬದಲಾಗಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟನೆ ಮಾಡಬೇಕು. ಅಧ್ಯಕ್ಷೆ ಮುರ್ಮು ಅವರನ್ನು ಸರ್ಕಾರ ಸಂಪೂರ್ಣವಾಗಿ ಮೂಲೆಗುಂಪು ಮಾಡಿದೆ ಎಂದು ಆರೋಪಿಸಿ 21 ವಿರೋಧ ಪಕ್ಷಗಳು ದೇಶದ ಅತಿದೊಡ್ಡ ಕಾರ್ಯಕ್ರಮವನ್ನು ಬಹಿಷ್ಕಾರ ಮಾಡಿವೆ. ಶಿರೋಮಣಿ ಅಕಾಲಿದಳ, ಬಿಜೆಡಿ ಮತ್ತು ವೈಎಸ್‌ಆರ್‌ಸಿ ಪಕ್ಷಗಳು ಹಾಗೂ ಬಿಜೆಪಿಯ ಎನ್‌ಡಿಎ ಮಿತ್ರಪಕ್ಷಗಳು ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಹೇಳಿವೆ.
ಇದನ್ನೂ ಓದಿ: ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭಕ್ಕೆ 19 ಪ್ರತಿಪಕ್ಷಗಳಿಂದ ಬಹಿಷ್ಕಾರ!