ನವದೆಹಲಿ: ಮಧ್ಯಪ್ರದೇಶ, ಛತ್ತೀಸ್ಗಢ, ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಸಾಧಿಸಿರುವ ಬಿಜೆಪಿ ಮುಂದಿನ ಮುಖ್ಯಮಂತ್ರಿ ಆಯ್ಕೆ ಕಸರತ್ತು ನಡೆಸುತ್ತಿದೆ. ನಾಳೆ ನಡೆಯುವ ಶಾಸಕಾಂಗ ಸಭೆಯಲ್ಲಿ ಮೂರೂ ರಾಜ್ಯಗಳ ಸಿಎಂ ಹೆಸರು ಘೋಷಿಸುವ ಸಾಧ್ಯತೆ ಇದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ರಾಜಸ್ಥಾನಕ್ಕೆ ಕೇಂದ್ರ ವೀಕ್ಷಕರನ್ನಾಗಿ ನೇಮಿಸಿದರೆ, ಮಧ್ಯಪ್ರದೇಶಕ್ಕೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಛತ್ತೀಸ್‌ಗಢಕ್ಕೆ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರನ್ನು ನೇಮಿಸಲಾಗಿದೆ.
ಬಿಜೆಪಿ ಮೂಲಗಳ ಪ್ರಕಾರ, ರಾಜನಾಥ್ ಸಿಂಗ್ ಜೊತೆಗೆ ಪಕ್ಷದ ನಾಯಕರಾದ ಸರೋಜ್ ಪಾಂಡೆ ಮತ್ತು ವಿನೋದ್ ತಾವ್ಡೆ ಅವರನ್ನು ಕೇಂದ್ರ ವೀಕ್ಷಕರಾಗಿ ರಾಜಸ್ಥಾನಕ್ಕೆ ಕಳುಹಿಸಲಾಗಿದೆ. ಅದೇ ರೀತಿ ಖಟ್ಟರ್ ಜೊತೆಗೆ ಪಕ್ಷದ ಮುಖಂಡರಾದ ಕೆ.ಲಕ್ಷ್ಮಣ್ ಮತ್ತು ಆಶಾ ಲಾಕ್ರ ಅವರನ್ನು ಕೇಂದ್ರ ವೀಕ್ಷಕರನ್ನಾಗಿ ಕಳುಹಿಸಲಾಗಿದೆ. ಛತ್ತೀಸ್‌ಗಢಕ್ಕೆ ಅರ್ಜುನ್ ಮುಂಡಾ ಅವರ ಜೊತೆಗೆ ಮತ್ತೊಬ್ಬ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಮತ್ತು ಪಕ್ಷದ ನಾಯಕ ದುಶ್ವಂತ್ ಕುಮಾರ್ ಗೌತಮ್ ಅವರನ್ನು ವೀಕ್ಷಕರನ್ನಾಗಿ ಆಯ್ಕೆ ಮಾಡಲಾಗಿದೆ.
ನಾಳೆ ಶಾಸಕಾಂಗ ಸಭೆ: ಆಯಾ ರಾಜ್ಯಗಳಲ್ಲಿ ನಾಳೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಹೊಸದಾಗಿ ಚುನಾಯಿತ ಶಾಸಕರು ತಮ್ಮ ನಾಯಕ ಯಾರು ಎಂಬುದನ್ನು ಸೂಚಿಸಲಿದ್ದಾರೆ. ವೀಕ್ಷಕರು ಎಲ್ಲ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಬಳಿಕ ಹೊಸ ಸಿಎಂ ಯಾರು ಎಂಬುದನ್ನು ಘೋಷಿಸಲಿದ್ದಾರೆ ಎಂದು ತಿಳಿದು ಬಂದಿದೆ. ಮೂರು ರಾಜ್ಯಗಳ ನಾಯಕರು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಪಕ್ಷದ ವರಿಷ್ಠರನ್ನು ಭೇಟಿಯಾಗಿದ್ದಾರೆ.
ಸಂಭಾವ್ಯ ಮುಖ್ಯಮಂತ್ರಿಗಳು ಇವರು?: ರಾಜಸ್ಥಾನ ಸಿಎಂ ಸ್ಥಾನದ ರೇಸ್‌ನಲ್ಲಿ ಹಲವು ಘಟಾನುಘಟಿಗಳ ಹೆಸರಿದೆ. ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಬಿಜೆಪಿಯ ಹಿರಿಯ ನಾಯಕ ಓಂ ಮಾಥುರ್, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಕೇಂದ್ರ ಸಚಿವ ಅರ್ಜುನ್ ಮೇಘವಾಲ್, ಕೇಂದ್ರ ಸಚಿವ ಅಶ್ವನಿ ವೈಷ್ಣವ್, ದಿಯಾ ಕುಮಾರಿ, ಬಾಬಾ ಬಾಲಕ ನಾಥ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಸಿಪಿ ಜೋಶಿ ಅವರು ಆಕಾಂಕ್ಷಿಗಳಾಗಿದ್ದಾರೆ. ಮಾಜಿ ಸಿಎಂ ವಸುಂಧರಾ ರಾಜೆ, ಕೆಲ ಶಾಸಕರ ಸಮೇತ ದಿಲ್ಲಿಯಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷ ನಡ್ಡಾ ಅವರನ್ನು ಭೇಟಿ ಮಾಡಿಧ್ದಾರೆ. ಜೊತೆಗೆ ಬಾಬಾ ಬಾಲಕನಾಥ್ ಅವರು ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ.
ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ಕೈಲಾಶ್ ವಿಜಯವರ್ಗಿಯ, ಪ್ರಹ್ಲಾದ್ ಪಟೇಲ್, ನರೇಂದ್ರ ಸಿಂಗ್ ತೋಮರ್ ಅವರ ಹೆಸರು ಸಿಎಂ ಸ್ಥಾನಕ್ಕೆ ಚಾಲ್ತಿಯಲ್ಲಿದೆ. ಈ ನಾಲ್ವರೂ ಪಕ್ಷದ ಪ್ರಭಾವಿಗಳೇ ಆಗಿದ್ದಾರೆ. ಇದರ ಜೊತೆಗೆ ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನೂ ಬಿಜೆಪಿ ಪರಿಗಣಿಸಬಹುದು ಎಂಬುದು ರಾಜಕೀಯ ತಜ್ಞರ ವಿಶ್ಲೇಷಣೆ.
ಛತ್ತೀಸ್ಗಢ ಸಿಎಂ ರೇಸ್ ತುಸು ಜಟಿಲವಾಗಿದೆ. ಆರು ಪ್ರಬಲ ನಾಯಕರ ಹೆಸರು ಸಿಎಂ ಹುದ್ದೆಗೆ ಕೇಳಿಬಂದಿದೆ. ಮಾಜಿ ಸಿಎಂ ರಮಣ್ ಸಿಂಗ್, ಮಾಜಿ ಸಿಎಂ ಭೂಪೇಶ್ ಬಘೇಲ್ ಅವರ ಸೋದರಳಿಯ ವಿಜಯ್ ಬಘೇಲ್, ಮಾಜಿ ಐಪಿಎಸ್ ಅಧಿಕಾರಿ ಒಪಿ ಚೌಧರಿ, ಕೇಂದ್ರದ ಮಾಜಿ ಸಚಿವ ವಿಷ್ಣು ಡಿಯೋ ಸಾಯಿ, ಓಬಿಸಿ ಸಮುದಾಯದ ನಾಯಕ ಅರುಣ್ ಸಾವೋ, ಪಕ್ಷದ ನಾಯಕಿ ರೇಣುಕಾ ಸಿಂಗ್ ರೇಸ್ನಲ್ಲಿದ್ದಾರೆ.
ಇದನ್ನೂ ಓದಿ: ಮೂರು ರಾಜ್ಯಗಳಿಗೆ ನೂತನ ಸಿಎಂ: ಶಾಸಕಾಂಗ ಪಕ್ಷದ ನಾಯಕರ ಆಯ್ಕೆಗೆ ವೀಕ್ಷಕರ ನೇಮಿಸಿದ ಬಿಜೆಪಿ