ಪುದುಚೇರಿ : ಪುದುಚೇರಿಯಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಇದರಲ್ಲಿ ಯುವಕರಿಗೆ 2.5 ಲಕ್ಷ ಹೊಸ ಉದ್ಯೋಗಗಳು, ಎಲ್ಲಾ ಮೀನುಗಾರರಿಗೆ ವಾರ್ಷಿಕ 6,000 ರೂ.ಗಳ ಆರ್ಥಿಕ ನೆರವು ಮತ್ತು ಉನ್ನತ ಶಿಕ್ಷಣ ಪಡೆಯುವ ಬಾಲಕಿಯರಿಗೆ ಉಚಿತ ಸ್ಕೂಟಿ ನೀಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.
ಸಾರ್ವಜನಿಕರ ಸಲಹೆಗಳನ್ನು ತೆಗೆದುಕೊಂಡ ನಂತರ ಬಿಜೆಪಿ ತನ್ನ ಈ ಪ್ರಣಾಳಿಕೆ ಬಿಡುಗಡೆ ಮಾಡಿದೆ. ನಮ್ಮ ಪ್ರಣಾಳಿಕೆಗಳು ಕೇವಲ ಎಸಿ ಕೋಣೆಯಲ್ಲಿ ಇರುವಂತೆ ಮಾಡಿಲ್ಲ. ಮೋದಿ ಅವರು ನೀಡಿದ ಭರವಸೆಗಳನ್ನು ಜನರು ಕಣ್ಣಾರೆ ನೋಡುತ್ತಾರೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ 2,000 ರೂ. ಟಾಪ್-ಅಪ್ ನೆರವು, ಪುದುಚೇರಿಗಾಗಿ 5 ವರ್ಷಗಳ ಜಲ ಭದ್ರತಾ ಯೋಜನೆ ಮತ್ತು ರಾಷ್ಟ್ರೀಯ ಗೋಕುಲ್ ಮಿಷನ್ ಅಡಿ ಸಮಗ್ರ ಜಾನುವಾರು ಅಭಿವೃದ್ಧಿ ಕೇಂದ್ರ ಸ್ಥಾಪಿಸುವುದಾಗಿ ಬಿಜೆಪಿ ಭರವಸೆ ನೀಡಿದೆ.
ಮೀನುಗಾರರಿಗೆ, ಬೀದಿ ಮೀನು ಮಾರಾಟಗಾರರಿಗೆ, ಮೀನುಗಾರರ ಪತ್ನಿಯರಿಗೆ ಮುದ್ರಾ ಮೂಲಕ ಸಾಲ ಒದಗಿಸಲಾಗುವುದು. ಮೀನುಗಾರಿಕೆ ನಿಷೇಧಿತ ಸಂದರ್ಭದಲ್ಲಿ ಅವರ ಜೀವನ ನಿರ್ವಹಣೆಗೆ 5000 ಸಾವಿರ ನೀಡಲಾಗುತ್ತಿದ್ದ ಭತ್ಯೆಯನ್ನು 8,000 ರೂ.ಗೆ ಹೆಚ್ಚಳ ಮಾಡಲಾಗುವುದು. ಫೈಬರ್ ಬೋಟ್‌ಗಳು, ಡೀಸೆಲ್ ಮತ್ತು ಕೋಲ್ಡ್ ಸ್ಟೋರೇಜ್‌ಗೆ ಸಹಾಯಧನ ನೀಡಲಾಗುತ್ತದೆ ಎಂದು ಪ್ರಣಾಳಿಕೆಯಲ್ಲಿ ಬಿಜೆಪಿ ತಿಳಿಸಿದೆ.
ಐದು ವರ್ಷಗಳಲ್ಲಿ ರೈತರ ಆದಾಯ, ಹಾಲು ಮತ್ತು ಡೈರಿ ಉತ್ಪಾದನೆ ದ್ವಿಗುಣಗೊಳಿಸುವ ಬಗ್ಗೆಯೂ ಪಕ್ಷವು ಭರವಸೆ ನೀಡಿದೆ. ಹಾಗೆ ಎಂಎಸ್‌ಎಂಇಗಳು, ಸ್ಟಾರ್ಟ್ ಅಪ್‌ಗಳು, ಸ್ವಸಹಾಯ ಸಂಘಗಳು, ಮೀನುಗಾರರ ಸಹಕಾರ ಸಂಸ್ಥೆಗಳು, ಕುಶಲಕರ್ಮಿಗಳು ಸೇರಿ ಇತರೆ ಸಂಸ್ಥೆಗಳ ನಿರ್ವಹಣೆಗೆ ಪುದುಚೇರಿ ಹಣಕಾಸು ನಿಗಮವನ್ನು (ಪಿಎಫ್‌ಸಿ) ಸ್ಥಾಪಿಸುವುದು ಮತ್ತು ಸಾರಿಗೆ ನಷ್ಟ ಕಡಿಮೆ ಮಾಡಲು ಎಲ್ಲಾ ಸಮಗ್ರ ಸೌಲಭ್ಯಗಳು ಮತ್ತು ತ್ವರಿತ ವಹಿವಾಟು ಸಮಯವನ್ನು ಹೊಂದಿರುವ ಮೆಗಾ ಟೆಕ್ಸ್ಟೈಲ್ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಉಲ್ಲೇಖಿಸಲಾಗಿದೆ.
ಪುದುಚೇರಿ ಶಿಕ್ಷಣ ಮಂಡಳಿ ಸ್ಥಾಪಿಸಲಾಗುವುದು. ಹಾಗೆ ಇಲ್ಲಿನ ವಿದ್ಯಾರ್ಥಿಗಳಿಗೆ Xth ಮತ್ತು XIIನೇ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಅನುಕೂಲ ಮಾಡಿಕೊಡಲಾಗುವುದು. ಕೆಜಿಯಿಂದ ಪಿಜಿಯವರೆಗೆ ಎಲ್ಲ ಮಹಿಳಾ ವಿದ್ಯಾರ್ಥಿಗಳಿಗೆ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ಖಾತರಿಪಡಿಸುವುದು.
ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ಉಚಿತವಾಗಿ ನೀಡುವುದು ಮತ್ತು ಪುದುಚೇರಿಯಲ್ಲಿ ಉನ್ನತ ಶಿಕ್ಷಣ ಕಲಿಯುತ್ತಿರುವ ಎಲ್ಲ ಹುಡುಗಿಯರಿಗೆ ಉಚಿತ ಸ್ಕೂಟಿ ಒದಗಿಸುವ ಬಗ್ಗೆ ಪ್ರಣಾಳಿಕೆ ಮುಖಾಂತರ ಭರವಸೆ ನೀಡಿದೆ.
ಸ್ಟಾರ್ಟ್ ಅಪ್‌ಗಳಿಗೆ 25 ಲಕ್ಷ ರೂ.ಗಳವರೆಗೆ ಸಬ್ಸಿಡಿ ಸಾಲ ನೀಡಲು ಸ್ಟಾರ್ಟ್ ಅಪ್ ಪುದುಚೇರಿ ಫಂಡ್ ರಚಿಸಲಾಗುವುದು. ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಪುದುಚೇರಿ ಮೂಲದ ವಿದ್ಯಾರ್ಥಿಗಳಿಗೆ ಶೇ.30ರಷ್ಟು ಮೀಸಲಾತಿ ನೀಡಲಾಗುವುದು. ಸಮುದಾಯ ಕ್ರೀಡಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು, ಪ್ರತಿ ಕ್ಷೇತ್ರದಲ್ಲೂ ಸಾರ್ವಜನಿಕ ಜಿಮ್‌ಗಳನ್ನು ಸ್ಥಾಪಿಸಲಾಗುವುದು ಎಂದು ಬಿಜೆಪಿ ಹೇಳಿದೆ.
ಪುದುಚೇರಿಯಲ್ಲಿ 30 ವಿಧಾನಸಭಾ ಸ್ಥಾನಗಳಿಗೆ ಏಪ್ರಿಲ್ 6ರಂದು ಮತದಾನ ನಡೆಯಲಿದೆ. 30 ವಿಧಾನಸಭಾ ಸ್ಥಾನಗಳಲ್ಲಿ ಐದು ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಮೀಸಲಾಗಿದೆ. 2016ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನ ಗೆದ್ದಿತ್ತು. ಅಖಿಲ ಭಾರತ ಎನ್ಆರ್ ಕಾಂಗ್ರೆಸ್ ಎಂಟು ಸ್ಥಾನ ಗಳಿಸಿದ್ದರೆ, ಎಐಎಡಿಎಂಕೆ ನಾಲ್ಕು ಸ್ಥಾನ ಪಡೆದಿತ್ತು. ಬಿಜೆಪಿಗೆ ಯಾವುದೇ ಸ್ಥಾನ ಗೆಲ್ಲಲು ಸಾಧ್ಯವಾಗಿರಲಿಲ್ಲ.