ಚಂಡೀಗಢ: ಪಂಜಾಬ್ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಕೇವಲ 7 ದಿನಗಳು ಮಾತ್ರ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳಾದ ಪಂಜಾಬ್ ಲೋಕ್ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳ (ಯುನೈಟೆಡ್) ಮೈತ್ರಿಕೂಟ ಶನಿವಾರ ತಮ್ಮ 11 ಅಂಶಗಳ 'ಸಂಕಲ್ಪ ಪತ್ರ'ವನ್ನು (ಪ್ರಣಾಳಿಕೆ) ಬಿಡುಗಡೆ ಮಾಡಿದೆ.
ಈ ಸಂಕಲ್ಪ ಪತ್ರ ಮಾಫಿಯಾ ಮುಕ್ತ ಪಂಜಾಬ್, ಆರೋಗ್ಯ, ಶಿಕ್ಷಣ, ಕೈಗಾರಿಕೆ, ಮಾದಕ ದ್ರವ್ಯ ಮುಕ್ತ ಪರಿಸರ, ಉದ್ಯೋಗ, ಸಮೃದ್ಧ ರೈತರು, ಕೋಮು ಸೌಹಾರ್ದತೆ ಹಾಗು ಉಚಿತ ವಿದ್ಯುತ್ ಇತ್ಯಾದಿ ಭರವಸೆಗಳನ್ನು ಒಳಗೊಂಡಿದೆ.
ರಾಜ್ಯದ ಯುವಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ.75ರಷ್ಟು ಮೀಸಲಾತಿ ಮತ್ತು ಖಾಸಗಿ ಉದ್ಯೋಗಗಳಲ್ಲಿ ಶೇ. 50ರಷ್ಟು ಮೀಸಲಾತಿಯ ಭರವಸೆ ಪ್ರಣಾಳಿಕೆಯ ಪ್ರಮುಖ ಅಂಶ. ಅಲ್ಲದೇ, ವಿವಿಧ ವರ್ಗಗಳಿಗೆ ಪರಿಹಾರದ ಭರವಸೆ, ನಿರುದ್ಯೋಗ ಭತ್ಯೆ, ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ.35ರಷ್ಟು ಮೀಸಲಾತಿ ಪ್ರಣಾಳಿಕೆಯಲ್ಲಿ ಸೇರಿದೆ.
ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ, ಬಳಿಕ ಮಾತನಾಡಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, "ಪಂಜಾಬ್ ಅತ್ಯಂತ ಸೂಕ್ಷ್ಮವಾದ ಗಡಿ ರಾಜ್ಯವಾಗಿದ್ದು, ರಾಜ್ಯ ಸ್ಥಿರವಾಗಿರಲು ಪ್ರಭಾವಿ ನಾಯಕರು ಅಧಿಕಾರದಲ್ಲಿರುವುದು ಅವಶ್ಯಕ" ಎಂದರು.
ಹರಿಯಾಣದ ಬಿಜೆಪಿ-ಜೆಜೆಪಿ ಸರ್ಕಾರ ಈ ಹಿಂದೆ ರಾಜ್ಯದಲ್ಲಿ ನೆಲೆಸಿರುವ ಯುವಕರಿಗೆ ಖಾಸಗಿ ವಲಯದ ಉದ್ಯೋಗಗಳಲ್ಲಿ ಶೇ.75ರಷ್ಟು ಮೀಸಲಾತಿ ನೀಡುವ ಕಾನೂನು ಅಂಗೀಕರಿಸಿತ್ತು.