ನವದೆಹಲಿ: ಇತ್ತೀಚೆಗೆ ಮುಕ್ತಾಯವಾದ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ಗಢ ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆದ್ದಿರುವ ಬಿಜೆಪಿಯ ಹತ್ತು ಮಂದಿ ಲೋಕಸಭೆ ಹಾಗೂ ರಾಜಸಭೆಯ ಸಂಸದರು ತಮ್ಮ ಸಂಸತ್ ಸದಸ್ಯ ಸ್ಥಾನಕ್ಕೆ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ. ಇತರ ಇಬ್ಬರು ಸಂಸದರಾದ ಬಾಬಾ ಬಾಲಕನಾಥ್ ಹಾಗೂ ರೇಣುಕಾ ಸಿಂಗ್ ಇಂದು ಸಂಸತ್ತಿನ ಕಲಾಪಕ್ಕೆ ಬಂದಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದ ನಿಯೋಗ ಇಂದು ಪ್ರಧಾನಿ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ರಾಜ್ಯಸಭಾ ಸಭಾಪತಿಗಳಾದ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಭೇಟಿ ಮಾಡಿತು. ಪ್ರಧಾನಿ ಮೋದಿ ಹಾಗೂ ನಡ್ಡಾ ಪ್ರತ್ಯೇಕ ಸಭೆ ನಡೆಸಿದರು. ಈ ಸಭೆಯ ಬಳಿಕ ಸಂಸದರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಳ್ಳಲಾಯಿತು.
ಮಧ್ಯಪ್ರದೇಶದ ನರಸಿಂಗಪುರ ವಿಧಾನಸಭಾ ಕ್ಷೇತ್ರದಿಂದ ಗೆದ್ದಿರುವ ಬಿಜೆಪಿ ನಾಯಕ ಪ್ರಹ್ಲಾದ್ ಸಿಂಗ್ ಪಟೇಲ್ ಮಾತನಾಡಿ, ''ನಾನು ಸಂಸದನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಶೀಘ್ರವೇ ಸಚಿವ ಸಂಪುಟದ ಸ್ಥಾನಕ್ಕೂ ರಾಜೀನಾಮೆ ನೀಡಲಿದ್ದೇನೆ'' ಎಂದು ತಿಳಿಸಿದರು. ಇವರು ಆಹಾರ ಸಂಸ್ಕರಣಾ ಕೈಗಾರಿಕೆ ಇಲಾಖೆಯ ರಾಜ್ಯ ಖಾತೆ ಸಚಿವರಾಗಿದ್ದಾರೆ.
ಇತರ ಸಂಸದರು ಯಾರು?: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರದ ಮಾಜಿ ಕೃಷಿ ಸಚಿವ, ಸಂಸದರಾದ ನರೇಂದ್ರ ಸಿಂಗ್ ತೋಮರ್, ರಾಕೇಶ್ ಸಿಂಗ್, ಉದಯ್ ಪ್ರತಾಪ್, ರಿತಿ ಪಾಠಕ್ ಸ್ಪರ್ಧೆ ಮಾಡಿ ಗೆದ್ದಿದ್ದಾರೆ. ಈಗ ತಮ್ಮ ತಾವು ಪ್ರತಿನಿಧಿಸಿದ ವಿಧಾನಸಭಾ ಸ್ಥಾನ ಉಳಿಸಿಕೊಂಡು ಸಂಸತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.
ಅದೇ ರೀತಿಯಾಗಿ, ರಾಜಸ್ಥಾನದಲ್ಲಿ ಸಂಸದರಾದ ರಾಜ್ಯವರ್ಧನ್ ಸಿಂಗ್ ರಾಥೋಡ್, ದಿಯಾ ಕುಮಾರಿ ಹಾಗೂ ರಾಜ್ಯಸಭಾ ಸಂಸದ ಕಿರೋಡಿ ಲಾಲ್ ಮೀನಾ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಕಂಡಿದ್ದಾರೆ. ಛತ್ತೀಸ್‌ಗಢದಲ್ಲಿ ಸಂಸದರಾದ ಅರುಣ್ ಸಾವೊ ಮತ್ತು ಗೋಮತಿ ಸಾಯಿ ವಿಧಾನಸಭೆಯ ಅಖಾಡದಲ್ಲಿ ಜಯ ಸಾಧಿಸಿದ್ದು, ಇವರೂ ಕೂಡ ತಮ್ಮ ಲೋಕಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ತೆಲಂಗಾಣದಲ್ಲಿ ಸೋತ ಸಂಸದರು: ಹಿಂದಿ ಪ್ರಾಬಲ್ಯದ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ಗಢ ವಿಧಾನಸಭೆ ಚುನಾವಣಾ ಫಲಿತಾಂಶ ಡಿ.3ರಂದು ಪ್ರಕಟವಾಗಿದ್ದು, ಈ ಮೂರು ಕಡೆ ಕೂಡ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮತ್ತೊಂದೆಡೆ, ತೆಲಂಗಾಣದಲ್ಲೂ ಬಿಜೆಪಿ ಮೂವರು ಸಂಸದರನ್ನು ವಿಧಾನಸಭಾ ಕಣಕ್ಕಿಳಿಸಿತ್ತು. ಆದರೆ, ಮೂವರು ಸಹ ಸೋಲು ಕಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಸಂಸದ ಬಂಡಿ ಸಂಜಯ್ ಕುಮಾರ್ ಕರೀಂನಗರ ಕ್ಷೇತ್ರ, ನಿಜಾಮಾಬಾದ್ ಸಂಸದ ಡಿ.ಅರವಿಂದ್ ಕೊರಟ್ಲಾ ಕ್ಷೇತ್ರ, ಅದಿಲಾಬಾದ್ ಸಂಸದ ಸೋಯಮ್ ಬಾಪು ರಾವ್ ಬೋತ್ ವಿಧಾನಸಭಾ ಕ್ಷೇತ್ರದಿಂದ ಪರಾಭವಗೊಂಡಿದ್ದಾರೆ.
ಇದನ್ನೂ ಓದಿ: ತೆಲಂಗಾಣ: ಬಿಜೆಪಿಯ ಮೂವರು ಸಂಸದರಿಗೆ ಸೋಲು, ಕಾಂಗ್ರೆಸ್‌ನ ಮೂವರಿಗೆ ಗೆಲುವು